10 November 2007

ಬಾಳ ಪುಟದಿಂದ ೦.೧



ನಾನು ಒಂದು ವೇಳೆ ....
ನನ್ನ ಮುಂದಿನ ದೊಡ್ಡಸ್ತಿಕೆಯ ಬಗ್ಗೆ ಆಲೋಚಿಸದಿದ್ದರೆ,
ಮತ್ತು ಸುತ್ತಲಿನ ಹಸಿರಿನ ಬಗ್ಗೆ ಹಾಗೂ ಕಟ್ಟಡದ ಹೊಸ ಕಣ್ಣಿನಲ್ಲಿ ನೋಡಿದ್ದರೆ,
ಮತ್ತು ನನ್ನ ಸುತ್ತಮುತ್ತಲಿರುವವರ ಜೊತೆ ಕೈಜೋಡಿಸಿದ್ದರೆ,
ಮತ್ತು ಹಂಚಿನ ಮೇಲೆ ಬಿದ್ದ ಮಳೆ ಹನಿಯ ಶಬ್ದವ ಆಲಿಸಿದ್ದರೆ,
ಮತ್ತು ಮೊದಲ ಮಳೆಯ ಮಣ್ಣಿನ ವಾಸನೆ ತೆಗೆದುಕೊಂಡಿದ್ದರೆ,
ಮತ್ತು ಕ್ಷಣಕಾಲ ನನ್ನ ಮೇಲೆ ನಾನು ಹಾಕಿಕೊಂಡ ಕಟ್ಟುಪಾಡು ತೆಗೆದಿದ್ದರೆ,
ಮತ್ತು ನನ್ನ ಬಾಳಸಂಗಾತಿಯ ಹೆಗಲ ಮೇಲೆ ಕೈಹಾಕಿ ಹಿಡಿದುಕೊಂಡಿದ್ದರೆ,

ಹೌದು...... ಇದ್ಯಾವುದಕ್ಕೂ ಇನ್ನೂ ಕಾಲ ಮೀರಿಲ್ಲ !


-------------------------------------------------------------

ಈಗ ಮುಂಜಾವು.

ನನ್ನ ಕೈಯ್ಯಲ್ಲಿದೆ ಇನ್ನೊಂದು ಕರಗದ ದಿನ.
ಇನ್ನೊಂದು ದಿನ- ಕೇಳಲು ಹಾಗೂ ಪ್ರೀತಿಸಲು,
ಕಳೆದುಕೊಳ್ಳಲು ಹಾಗೂ ವೈಭವತೆಯನ್ನು ನೋಡಲು.
ನಾನು ಇನ್ನೊಂದು ದಿನಕ್ಕಾಗಿ ಇಲ್ಲಿದ್ದೇನೆ.

ನಾನು ಈ ಮುಂಜಾವಿಗೆ ಇರದವರ ಬಗ್ಗೆ ಆಲೋಚಿಸುತ್ತಿದ್ದೇನೆ.

ನಾನು ಈ ದಿನವ ಏನನ್ನೂ ಬಯಸದೇ ಬದುಕುವೆ.
ನಾನು ಕೇವಲ ಬದುಕಲು ಬಯಸುವೆ.

-------------------------------------------------------------

ನಮ್ಮ ಜೀವನವು ಸಣ್ಣ ಸಣ್ಣ ವಾದ ವಿವಾದಗಳಲ್ಲಿ ನಲುಗಿಹೋಗಿತ್ತು. ಆದರೆ ಈಗ ನಾವು ವಾದ ವಿವಾದ ಯಾವುದರ ಬಗ್ಗೆ ಎಂದು ತಿಳಿಯಲು ದೊಡ್ಡದಾಗಿ ವಾದ ವಿವಾದ ಮಾಡುತ್ತೇವೆ.

08 November 2007

ನಾನು ಮತ್ತು ಪುಸ್ತಕ

ಟ್ರೈನಿನಲ್ಲಿ ಕೆಲಸಕ್ಕೆ ಬರುತ್ತಿರುವಾಗ ಪಕ್ಕದಲ್ಲಿ ನಿಂತ ಸಣ್ಣ ಕಣ್ಣಿನ ಆಸಾಮಿ ಆಯತಪ್ಪಿ ಬಿದ್ದಾಗಲೇ ನಾನು ನನ್ನ ಪುಸ್ತಕದ ಪರಿಧಿಯಿಂದ ಹೊರ ಬಂದಿದ್ದು. ಕಣ್ಣು ಮುಚ್ಚಿ ನಿಂತಿರುವವರು, ಸಿಕ್ಕ ಸಣ್ಣ ಜಾಗದಲ್ಲಿಯೇ ತಮ್ಮದೆ ಆದ ಭ್ರಮಾ ಲೋಕ ಸೃಷ್ಟಿಸ ಬಲ್ಲ ಪುಸ್ತಕ ಪ್ರೇಮಿಗಳು , ಕಣ್ಣು ಮುಚ್ಚಿ ಸದಾ ಸಂಗೀತ ಲೋಕದಲ್ಲಿ ವಿಹರಿಸುವವರು ಮುಂತಾದ ತಮ್ಮ ಸ್ವಂತ ಜಗತ್ತಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರನ್ನು ಹೊತ್ತ ಮೆಟ್ರೊ ಟ್ರೇನಿಗೆ ಗಮ್ಯ ತಲುಪುವ ತವಕ.

ಪುಸ್ತಕ ಹಿಡಿದು ಕಾಲದ ಸದುಪಯೋಗ ಪಡೆಯುವವರಲ್ಲಿ ನಾನೂ ಒಬ್ಬ. ನನ್ನ ಪುಸ್ತಕ ಪ್ರೇಮ, ನನಗೆ ತಗಲಿ ಹಾಕಿಕೊಂಡಿದ್ದು ನನ್ನ ಶಾಲಾ ದಿನದಲ್ಲಿ. ಬೊಂಬೆಮನೆ, ಚಂದಮಾಮ, ಬಾಲಮಿತ್ರದೊಂದಿಗೆ. ನನ್ನ ಓದುವ ಗೀಳಿಗೆ ನನ್ನ ತಂದೆ ಹಾಗೂ ಅಗ್ರಜನಿಂದ ಪ್ರೋತ್ಸಾಹದಾಯಕವಾಗಿ ಸದಾ ನನ್ನ ಜೋಳಿಗೆ ಪುಸ್ತಕದಿಂದ ತುಂಬಿರುತ್ತಿತ್ತು. ಅಲ್ಲಿನಿಂದ ಶುರುವಾದ ಪುಸ್ತಕದ ಹಿಂದಿನ ಓಟ ಇನ್ನೂ ಮುಗಿದಿಲ್ಲ. ಅದೊಂದು ಜೀವನ ಪರ್ಯಂತದ ಓಟ - Marathon for Lifetime.

- - - - - - - - - - - - - - - - - -

ಚಿಕ್ಕವನಿದ್ದಾಗ ಮುಂದೆ ಎನಾಗಬೇಕು ಎನ್ನುವ ಆಶೆಯಲ್ಲಿ ಗ್ರಂಥಪಾಲಕನಾಗುವ ಆದಮ್ಯ ಆಶೆಯೂ ಒಂದಾಗಿತ್ತು. ಕಾಲದ ಗತಿಯಲ್ಲಿ ಬದಲಾವಣೆಯ ಗಾಳಿಯಲ್ಲಿ ಮೂಲ ಸ್ವರೂಪ ಕಳೆದುಕೊಂಡು ಇಲ್ಲಿಗೆ ಬಂದು ತಲುಪಿ ಆಗಿದೆ. ಆ ಮುಗ್ಧ ನೆನಪುಗಳ ಗಾಳಿ ಬಿಸಿದಾಗ ಖುಷಿಯಾಗುವುದಂತೂ ಖಂಡಿತ.

- - - - - - - - - - - - - - - - - -

ಟೊಕೀಯೊಗೆ ಬಂದ ನಂತರ ಇಲ್ಲಿ Alien Registration Card ಹಾಗೂ ವರ್ಕ ಪರ್ಮಿಟ್ ಸಿಕ್ಕ ನಂತರ ಮೊದಲು ಮಾಡಿದ ಕೆಲಸ ಲೈಬ್ರರಿ ಕಾರ್ಡ ಮಾಡಿಸಿದ್ದು. ಇಲ್ಲಿ ಪ್ರತಿ ಗ್ರಂಥಾಲಯದಲ್ಲಿಯೂ ಪುಸ್ತಕ ಉಚಿತ. ಆ ಗ್ರಂಥಾಲಯದ ಕಾರ್ಡ್ ಇದ್ದರೆ ಆಯಿತು. ಪ್ರಸ್ತುತ ನನ್ನ ಬಳಿಯಲ್ಲಿ ಎರಡು ಕಾರ್ಡ್ ಇದೆ. ನಾನು ಖಾಯಂ ಹೋಗುವುದು ಹಿಬಿಯಾ ಗ್ರಂಥಾಲಯಕ್ಕೆ. ಒಟ್ಟಾರೆ ೧೦ ಪುಸ್ತಕ ಉಚಿತ. ೨೧ ದಿನಗಳ ಎರವಲು ದಿನ. ಹಾಗೆಯೇ ಸಾಂದ್ರ ಬಿಲ್ಲೆ ( CD ) ಯೂ ಎರವಲು ಸೇವೆಯಲ್ಲಿ ಇದೆ. ಆದರೆ ಕೇವಲ ೫ CD , ೧೫ ದಿನಗಳ ಕಾಲ. ಆಂಗ್ಲ ಭಾಷೆಯ ವಿಭಾಗ ಗ್ರಂಧಾಲಕ್ಕೆ ಹೋಲಿಸಿದರೆ ಸಣ್ಣದೆನಿಸಿದರೂ ಒಳ್ಳೆಯ ಸಂಗ್ರಹ ಇದೆ. ಭಾರತದಲ್ಲಿ ಬಹಿಷ್ಕಾರವಾದ ಸಲ್ಮಾನ್ ರಶ್ದಿ ಬರೆದ Satanic verses ಸಹ ಓದುವ ಯೋಗ ನನಗೆ ಇತ್ತು ಅಂಥ ಇಲ್ಲಿ ಆ ಪುಸ್ತಕ ನೋಡಿದಾಗಲೆ ತಿಳಿದಿದ್ದು. ಒಟ್ಟಿನಲ್ಲಿ ಕನ್ನಡದ ಪುಸ್ತಕದ ಕೊರತೆ ಬಿಟ್ಟರೆ ಮತ್ತೆನೂ ಇಲ್ಲ.

- - - - - - - - - - - - - - - - -

ಇಲ್ಲಿ ಪುಸ್ತಕದ ಅಂಗಡಿಯಲ್ಲಿ ನಿಂತು ಯಾವುದೇ ಪುಸ್ತಕವನ್ನೂ ಓದಬಹುದು. ಯಾರೂ ಏನೂ ಹೇಳುವುದಿಲ್ಲ. ಕೆಲವೊಂದು ಪುಸ್ತಕಾಲಯದಲ್ಲಿ ಈ ರೀತಿ ಪುಸ್ತಕ ಓದಲು ಬೇರೆ ಜಾಗವೇ ಇದೆ !

ಟಿಪ್ಪಣೆ: Tachiyomi suru (立ち読みする)- ಪುಸ್ತಕಾಲಯದಲ್ಲಿ ನಿಂತು ಓದುವುದು.

07 November 2007

ಬಾಳ ಪುಟದಿಂದ

ಮುಚ್ಚಿ ಕೊಟ್ಟಿದ್ದರ ಬಗ್ಗೆ ಬಡಾಯಿ ಕೊಚ್ಚಬಾರದು.

ಕಳೆದು ಹೋದದ್ದು ಹುಡುಕಿದರೆ ಸಿಗಬಹುದು; ದೋಚಿಕೊಂಡು ಹೋದದ್ದು ಎಂದಿಗೂ ಸಿಗಲಾರದು.

ಸಿಕ್ಕಷ್ಟರಲ್ಲಿಯೇ ತೃಪ್ತಿ ಯಾರೂ ಹೊಂದುವುದಿಲ್ಲ;
ಮುಂದಕ್ಕೆ ಹೋಗಿ ದೋಚುವ ಆಶೆಯನ್ನು ( ಯಾರೂ ) ಬಿಡುವುದೂ ಇಲ್ಲ.

( ಸಿಕ್ಕಿದಾಗ ) ನುಂಗಿದವ ಬದುಕಿದ.
ನೋಡಿದವ ಸೊರಗಿದ.

ಸಣ್ಣದಕ್ಕೆ ಆಶೆ ಪಡುವುದು ಮೂರ್ಖತನ.
ದೊಡ್ಡದ್ದು ಸಿಕ್ಕರೆ ಬಿಡುವುದೂ ಮೂರ್ಖತನ.

ಬಹುಮಾನ ಕೊಡುವವರನ್ನು ಅವಲಂಬಿಸಿದೆಯೇ ಹೊರತು ಅರ್ಹತೆಯುಳ್ಳವರನ್ನಲ್ಲ !