21 February 2008

ಸೇಬು ಹಣ್ಣಿನ ಸುತ್ತ ...

An apple a day keeps Doctor away ಎಂಬ ಮಾತು ಬಹುಕಾಲದಿಂದಲೂ ಪ್ರಚಲಿತವಿದೆ. ಆದರೆ ಈ ಮಾತು ನಿನ್ನೆಯ ದಿನಕ್ಕೆ ಮಾತ್ರ ಸೂಕ್ತ ಎಂಬುದು ಬಲ್ಲವರ ಅಂಬೋಣ. ಕಾರಣ ಅತಿ ವೇಗದಿಂದ ಬದಲಾಗುತ್ತಿರುವ ಇಂದಿನ 'ಗ್ಲೊಬಲ್ ವಿಲೆಜ' (ಈ ಶಬ್ದದ ಜನಕ - ಆಲ್ವಿನ್ ಟೊಫ್ಲರ್ - ಭವಿಷ್ಯದ ಬಗ್ಗೆ ಬಹಳಷ್ಟು ವಿಚಾರಗಳನ್ನು ತನ್ನ ಕಾಲದಲ್ಲಿಯೇ ಹುಟ್ಟುಹಾಕಿದವ),ವಿಶ್ವವೆಂಬ ಹಳ್ಳಿಯಲ್ಲಿ ಕಂಡುಕೇಳರಿಯದ ರೋಗರುಜಿನ ಕಲ್ಪನೆಗೂ ಮೀರಿ ಹುಟ್ಟುತ್ತಿವೆ. ಮನೆ ಮನೆಗೆ, ಹಳ್ಳಿಯಲ್ಲಿ ಸುದ್ದಿ ಹರಡುವ ವೇಗದಲ್ಲಿಯೇ ರೋಗವೂ ಹರಡಲುತ್ತಲಿದೆ. ಈ ಕಾರಣದಿಂದಲೇ ಇರಬೇಕು, ಒಬ್ಬ ಡಾಕ್ಟರ್ ತಮ್ಮ 'Waiting room' ಅಂದರೆ ರೋಗವಾಸಿಯಾಗುವುದೆಂದು ರೋಗಿ ನಿರಂತರವಾಗಿ ನಿರೀಕ್ಷಿಸುತ್ತಾ ಕುಳಿತು ಕೊಳ್ಳುವ 'ನಿರೀಕ್ಷಣಾ ಕೋಣೆ'ಯಲ್ಲಿ ಈ ಕೆಳಗಿನಂತೆ ಫಲಕ ಹಾಕಿರುವುದನ್ನು ನೋಡಿದ್ದೆ. 'An apple a day, doesn't do it. That's why you are here'(ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡದು ಅದಕ್ಕಾಗಿ ನೀವು ಇಲ್ಲಿದ್ದಿರಾ!) ಈಗಿನ ರಸಾಯನಿಕಗಳನ್ನು ಹಾಕಿ ಬೆಳೆಸಿದ ಸೇಬುಗಳು ಪೌಷ್ಟಿಕಾಂಶಕ್ಕಿಂತ ಹೆಚ್ಚಾಗಿ ಗಿಡ ಬೆಳೆಯಲು ನಾವು ಹಾಕಿದ ಕ್ರಿಮಿನಾಶಕ, ಕೀಟ ನಾಶಕ ರಸಾಯನಿಕಗಳನ್ನೇ ಹೆಚ್ಚಾಗಿ ಕುಡಿದು ಕೆಂಪಾಗಿರಬಹುದೆಂದು ಸ್ನೇಹಿತನೊಬ್ಬನ ಅಂಬೋಣ.

ನೀಚರು ಹಾಗೂ ಕಟುಕರು ಮಾತ್ರ ಸುಖದಿಂದ ಬದುಕಬಲ್ಲ ಇಂದಿನ ಜಗತ್ತಿನಲ್ಲಿ ಗೋಸುಂಬೆ ತರಹದ ಬುದ್ಧಿವಂತ ರೋಗದ ವಿರುದ್ಧ, ವೈದ್ಯರ ಫೀಸಿನ ವಿರುದ್ಧ ಪಾಪ, ಸಾಮಾನ್ಯ ಸೇಬುವಾದರೂ ಏನು ತಾನೆ ಹೊಡೆದಾಟ ಮಾಡಬಲ್ಲುದು? ಇಂದು ಯಾವುದೇ ರೋಗಕ್ಕಾದರೂ ವಿದೇಶಿ ವೈದ್ಯರೇ ಸರಿ ಎಂದು ಪುಡಾರಿಗಳು, ಸಿನೇಮಾ ತಾರೆಯರು , ಸಮಾಜದ (ನ)ಗಣ್ಯ ವ್ಯಕ್ತಿಗಳು ವಿದೇಶಯಾನ ಮಾಡುವ ಕಾಲ. ನಮ್ಮ ಮಂತ್ರಿ ಮಹೋದಯರು ವೈದ್ಯಕೀಯ ಖರ್ಚಿಗಾಗಿ ಲಕ್ಷಗಟ್ಟಲೆ ಸರಕಾರಿ ಹಣ ಉಪಯೋಗಿಸದರೆಂದು ಆಂಗ್ಲ ಪತ್ರಿಕಾ ವರದಿ. ಯಾವ ರೋಗಕ್ಕೆಂದು ವಿವರ ಲಭ್ಯವಿಲ್ಲ ( ಕೆಲವೊಂದು ರೋಗಗಳ ಹೆಸರು ಸಾರ್ವಜನಿಕ ಸ್ಥಳಗಳಲ್ಲಿ ಎತ್ತಬಾರದು ಎಂದು ಬಾಲಂಗೋಚಿಯ ಉದ್ಗಾರ ! ) ಎಂದು ಪತ್ರಿಕೆ ವರದಿ ಮಾಡಿದರೆ, ಯಾವ ವಿಚಿತ್ರ ರೋಗವೆಂದು ತಿಳಿಯದೆಂದು ವಿದೇಶಿ ವೈದ್ಯರು ಕೈಚೆಲ್ಲಿ ಕುಳಿತಿರ ಬಹುದು. ಹೀಗೆ ದೇಶಕ್ಕೆ ಹೊರೆಯಾಗಿ, ಮಧ್ಯಮ ಹಾಗೂ ಬಡವರ್ಗದ ಜನರ ಸಾಲದ ಹೊರೆ (ಕರದ ರೂಪದಲ್ಲಿ) ಹೆಚ್ಚುತ್ತಿರುವಾಗ ಸಾಮಾನ್ಯ ಜನರು ಸಾಲಗಾರರನ್ನು (ಹಾಗೂ ಜೊತೆಗೆ ಎಲ್ಲರನ್ನೂ) ದೂರವಿಡಲು 'An onion and a garlic a day will keep everyone away' ಬಾಯಿಯಿಂದ ಬರುವ ವಾಸನೆಯಿಂದ ಎಂದೆನ್ನಬಹುದೆನೋ? ಆದರೆ ಈಗ ತರಕಾರಿ ಬೆಲೆಯೂ ಮೇಲೆರುತ್ತಿರುವಾಗ ಅದೂ ಸಾಧ್ಯವಿಲ್ಲ. ಈ ಮಾತು "ಅಯ್ಯೋ, ಪಾಪ!" ಎಂದ್ಹೇಳಲು ಮಾತ್ರ ತಮ್ಮ ಕರುಣಾಸಾಗರವನ್ನು ಸೀಮಿತಗೊಳಿಸುವ (ಸಾಮಾನ್ಯ) ಸಮಾಜವನ್ನು ದೂರವಿಡಲು ಉಪಯೋಗಿಸಬಹುದು. "Where are all the good times gone" ಎಂಬ ಹಾಡನ್ನು ಕಟುಸಂಗೀತವೆಂದೇ ಸುದ್ದಿ ಮಾಡಿ ಯುವ ಜನಾಂಗ (ಜಾಣ ಕಿವುಡು ಯುವಜನಾಂಗಕ್ಕೆ ಅಂಟು ಕೊಂಡಿರುವ ರೋಗ ! )ದಲ್ಲಿ ಪ್ರಸಿದ್ಧಿ ಪಡೆದ Hard rock ಸಂಗೀತಕಾರನೊಬ್ಬ ಹಾಡಿದನೆಂಬ ನೆನಪು.(ವಿಮರ್ಶಾಕಾರರು Hardrock ಹುಟ್ಟಿದ ದಿನದಿಂದಲೇ ಸಂಗೀತಕ್ಕೆ ಒಳ್ಳೆಯ ದಿನಗಳು ಎಲ್ಲಿ ಹೋದವು ಎಂದು ಕೇಳುವ ಪರಿಸ್ಥಿತಿ ಬಂದಿದೆ ಎಂದಿದ್ದರು) ಈಗ ನಾವು ಅದೇ ಮಾತು " ಒಳ್ಳೆಯ ದಿನಗಳು ಎಲ್ಲಿ ಹೋದವು?" ಎಂದು ಕೇಳಲು ಇದು ಯೋಗ್ಯ ಸಮಯ. ಇಂದು ಪ್ರತಿ ರೋಗಕ್ಕೂ ತಲೆ, ಬಾಲ ಸೇರಿ ಹೊಸದಾದ ಹೆಸರೂ ಹಾಗೂ ವ್ಯಕ್ತಿತ್ವ ಬಂದಿದೆ. ಜೊತೆಗೆ ಚಿಕಿತ್ಸೆಗೆ ಅಷ್ಟೇ ಹಣವನ್ನು ನಮ್ಮಿಂದ ಹೊರಕಕ್ಕಿಸುವ ಬಲವೂ. Made for each other (ಒಬ್ಬರಿಗಾಗಿ ಇನ್ನೊಬ್ಬರು) ಎನ್ನುವಂತೆ ಇರುವ ವೈದ್ಯ ಹಾಗೂ ಔಷಧಿ ಕಂಪನಿ ಇಬ್ಬರಿಗೂ ಜೀವನಾಡಿಯಾಗಿದೆ. ಮಾನವ ಅದಕ್ಕೂ ಜಪ್ಪಯ್ಯ ಎನ್ನದೆ ತನ್ನ ಜೀವನದಲ್ಲಿ ರೋಗದ ನೆರಳು ಬೀಳದಂತೆ ಮಾಡಲು ಸಮರವನ್ನೇ ಸಾರಿದ್ದಾನೆ.

' ದೇವರು ದೊಡ್ಡ ಸೈನ್ಯದ ಜೊತೆ ನೀಡುತ್ತಾನೆ' ( God is on the side of Big battalion ) ಎಂದು ಫ್ರೆಂಚರ ದಂಡನಾಯಕ ನೆಪೋಲಿಯನ್ ಹೇಳಿದ ಮಾತು ಇಲ್ಲಿಗೂ ಅನ್ವಯಿಸುವುದು. ಮಾನವ ಇಂದು ಹೊಡೆದಾಟ ನಡೆಸುತ್ತಿರುವುದು ಕಂಡು, ಕೇಳರಿಯದಷ್ಟು ಅಗಾಧವಾದ ಸೂಕ್ಷಾಣು ಜೀವ ಸಾಮ್ರಾಜ್ಯದ ಎದುರು. ಅದಕ್ಕೆ ಜೊತೆ ನೀಡುತ್ತಿರುವುದು ನಮ್ಮ ಒಳ ಹೊರ ಎಲ್ಲವನ್ನೂ ಬಲ್ಲ ನಮ್ಮ ನಿಸರ್ಗ. ನಮ್ಮ ಗುಟ್ಟೆಲ್ಲವನ್ನೂ ತಿಳಿದ ಮಿತ್ರ ಶತ್ರುವಿನ ಜತೆ ನೀಡಿದರೆ ಫಲಿತಾಂಶ ಏಕಮುಖಿ. ಅದರಂತೆ ಜೀವಸಂಕುಲದ ಸಮತೋಲನವನ್ನು ಸರಿಯಾಗಿ ತೂಗಿಸಿ ಕೊಂಡು ಹೋಗುವ ' ಮಹಾತಾಯಿ ' ಪ್ರಕೃತಿ ಮುಂದಿನ ಶತಮಾನಗಳಲ್ಲಿ ಯಾವ ಆಶ್ಚರ್ಯವನ್ನು ಬರುವ ಮಾನವ ಸಂಕುಲಕ್ಕೆ ಕಾದಿರಿಸಿದ್ದಾಳೆ ಎಂದು ಕಾಲದ ಪರಿವೆಯೇ ಇಲ್ಲದ ಕಾರ್ಯ ನಿರ್ವಾಹಕ ಕಾಲನೇ ಹೇಳಬಲ್ಲನು.

(ಬೆಳಕನ್ನು ಕಾಣದ ಲೇಖನ - ಖಾಸಗಿ ಪ್ರಸಾರಕ್ಕೆ (Private Circulation ಗೆ ಇಟ್ಟದ್ದು !)

-----------------------------

ಬರೆದ ಕಮೆಂಟಿನ್ನು ಮುಂದಿಟ್ಟುಕೊಂಡು ಮುಂದುವರೆಸಿದ್ದು !

sunaath ಧನ್ಯವಾದಗಳು ... ನೀವು ಹೇಳಿದಂತೆ Grin and Bear it ನಿಜಕ್ಕೂ ಚೆನ್ನಾಗಿದೆ ...

( Grin and Bear it - to accept an unpleasant or difficult situation because there is nothing you can do to improve it. )




08 February 2008

ಎರವಲು ಪಡೆದಿದ್ದು

# ಈ ಪುಸ್ತಕದ ಬಹುದೊಡ್ಡ ದೋಷವೆಂದರೆ ಓದುಗನಾದ ನೀನೆ.
ನಿನಗೆ ವಯಸ್ಸಾಗುವ ಅವಸರ.
ಆದರೆ ಈ ಪುಸ್ತಕ ನಿಧಾನವಾಗಿ ಮುಂದುವರೆಯುತ್ತದೆ.
ನಿನಗೆ ನೇರವಾದ, ಸಾಕಷ್ಟು ಸತ್ವವುಳ್ಳ ಕತೆ ಇಷ್ಟ. ಜೊತೆಗೆ ಸರಳವಾದ ಶೈಲಿ ಬೇಕು.
ಆದರೆ ಈ ಪುಸ್ತಕ ಮತ್ತು ನನ್ನ ಶೈಲಿ ಕುಡುಕರ ಹಾಗೆ ಎಡವುತ್ತಾ ಮುಗ್ಗರಿಸುತ್ತದೆ.

# ನನ್ನ ಕಳೆಬರದ
ತಣ್ಣಗಿನ ಮಾಂಸವನ್ನು ಅಗಿದು
ತಿನ್ನುವ ಮೊದಲ ಹುಳುವಿಗೆ
ಈ ಮರಣೋತ್ತರ ಸಂಸ್ಮರಣೆಯನ್ನು
ಪ್ರೀತಿಯಿಂದ ಅರ್ಪಿಸುತ್ತೇನೆ.

# ಇನ್ನೊಬ್ಬರ ಹೊಟ್ಟೆಯಲ್ಲಿರುವ ನೋವನ್ನು ನಾವು ಅನಾಯಾಸವಾಗಿ, ಅತ್ಯಂತ ತಾಳ್ಮೆಯಿಂದ ಸಹಿಸಿಕೊಳ್ಳಬಹುದು.

# ನಾವು ಕಾಲವನ್ನು ಕೊಲ್ಲುತ್ತೇವೆ.
ಕಾಲ ನಮ್ಮನ್ನು ಹೂತು ಬಿಡುತ್ತದೆ.

(ಬ್ರೆಜಿಲ್ಲನ ಬರಹಗಾರ - ಮಜಾದೊ ದ ಅಸಿಸ್ ನ 'Epitaph of a small winner' ಪುಸ್ತಕದಿಂದ ಆಯ್ದದ್ದು )