27 August 2007

ಅಲೆಮಾರಿಯ ದಿನಚರಿಯಿಂದ ...

ದಿನ -7300
ಬದುಕಿದ್ದಾಗಲೆಲ್ಲ 'ಸಾವು,ಸಾವು' ಎಂದು ಬಡಬಡಿಸುತ್ತಾ - ಸಾಯುವ ದಿನ ಬದುಕಿಗಾಗಿ ಹಂಬಲಿಸಿದ್ದು ಎಂಥ ವಿಪರ್ಯಾಸ ( ಪ್ರತ್ಯಕ್ಷ ದರ್ಶನ )

ದಿನ - 7308
ಪಂಚೇಂದ್ರಿಯಗಳನ್ನು ಮೀರಿ ಒಳನುಗ್ಗುವ ಅನುಭವಗಳು ನಮಗೆ ಸತ್ಯದ ದರ್ಶನ ಮಾಡಿಸಬಲ್ಲವು.ಅಕ್ಷರಗಳ ಮೂಲಕ ಒಳಸೇರಿದಷ್ಟೇ ನಮ್ಮನ್ನು ನಿಜವಾಗಿಯೂ ಒಳಗೊಳ್ಳಬಲ್ಲದು.ಒಳಗೊಳಗೆ ಬೆಳೆಯಬಲ್ಲದು.ಕಾಣದ ದಾರಿಯಲ್ಲಿ ಕರೆದೊಯ್ಯಬಲ್ಲುದು.

ದಿನ - 10885
ಬದುಕುವ ಭಯ - ಸಾವಿನ ಭಯಕ್ಕಿಂತ ದೊಡ್ಡದು. ( 01/02/**** ).
ಆದರೆ ಸಾವಿನ ಸಾರ್ಥಕತೆಯಲ್ಲೇ ಬದುಕಿನ ನಿರರ್ಥಕತೆಯ ಅರಿವಾಗುವುದು. ( ಹಿಂದೊಮ್ಮೆ ನನ್ನ ದಿನಚರಿಯಲ್ಲಿ ಬರೆದ ನೆನಪು - 'ಆತ್ಮಹತ್ಯೆ ಮಾಡಿಕೊಳ್ಳಲು ಅಪಾರವಾದ ಧೈರ್ಯ ಬೇಕು. ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಾವಿನಲ್ಲಿ ಒಂದು ರೀತಿಯ ಪ್ರಶಾಂತತೆ ಮನುಷ್ಯರನ್ನು ಆವರಿಸುತ್ತದೆ ಎಂದು ನನ್ನ ಅನಿಸಿಕೆ ')

ದಿನ - 9754
ಮದುವೆ ಎನ್ನುವುದು ಅತಿ ಆಶೆ ಮತ್ತು ಅತ್ಯಧಿಕ ಅವಕಾಶಗಳ ಸಂಗಮ !

ದಿನ - 9755
ಬಿಡುವದರಲ್ಲಿ ಇರುವ ಆನಂದ , ಹಿಡಿಯುವದರಲ್ಲಿ ಇಲ್ಲ.
ಸಮಸ್ಯೆಯ ಸಾಕ್ಷಾತ್ಕಾರವೇ ಸಮಸ್ಯೆಗೆ ಪರಿಹಾರವೂ ಕೂಡ !

ದಿನ - 10884
ನೀವು ಸ್ವರ್ಗಕ್ಕೆ ಹೋಗಬಯಸಿದರೆ ನಿಮಗೊಂದು ಕಿವಿಮಾತು..
(ನೀವು ಸತ್ತಾಗ ಮಾತ್ರ ಇದು ಸಾಧ್ಯ. ಇದು ಜೀವನದ ಕಟು ಸತ್ಯವೂ ಹೌದು ! )

16 August 2007

ಗೆಳತಿಗೆ ಪತ್ರ

...... " ಯಾರು ನೋವಿಗೆ, ಕಾರ್ಪಣ್ಯಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೋ ಅವನು ಮನುಷ್ಯನಾಗುತ್ತಾನೆ.ಆನಂತರ ಕಲಾವಿದನಾಗುತ್ತಾನೆ. ಇಲ್ಲವೇ ಸಾಧಕನಾಗುತ್ತಾನೆ.ಆದರೆ ನೋವಿನ ಹೊಂಡದಲ್ಲಿ ಖಾಯಂ ಆಗಿ ಬಿದ್ದು, ಸ್ವಾನುಕಂಪದಿಂದ ಬಳಲುವಾತ, ಬದುಕನ್ನಿರಲಿ, ನೋವನ್ನು ಪ್ರಾಮಾಣಿಕವಾಗಿ ಪ್ರೀತಿಸಿರುವುದಿಲ್ಲ. ಬದುಕಿನಲ್ಲಿ ಅಸಂಖ್ಯರು ಕೊರಗಪ್ಪಗಳಾಗಿ ಮಾರ್ಪಾಡುವುದು ಹೀಗೆ. ನೋವೆಂಬುದು ಯಾವತ್ತೂ ರಿಲೇಟಿವ್. ಅದನ್ನು ಪ್ರಾಮಾಣಿಕವಾಗಿ ಇಷ್ಟ ಪಟ್ಟರೆ ಮಾತ್ರ ಅದರೊಂದಿಗೆ ಕದನ ಮತ್ತು ಗೆಲುವು ಸಾಧ್ಯ. ನೋವುಗಳನ್ನು ಪ್ರೀತಿಸಿದವನಿಗೆ ಜೀವನ ಪ್ರೀತಿ ತಾನಾಗಿ ಬರುತ್ತದೆ. ನಿರಂತರ ನೋವನ್ನು ನೀಡುತ್ತಾ ನನ್ನಲ್ಲಿ 'ಜೀವನ ಪ್ರೀತಿ' ಹುಟ್ಟಿಸಿದ ನಿನಗೆ Hats off And a friendly Bear Hug ! "

- ಗೆಳತಿ ನೀ ಸದಾ ಖುಷಿಯಿಂದರಲಿ ಎಂದು ತುಂಬು ಹೃದಯದ ಆಕಾಂಕ್ಷೆ ಹೊತ್ತ ( lonely ) ಗೆಳೆಯ

ಬಾಲಂಗೋಚಿ : ನೆನಪಿರಲಿ , " ಕನಸುಗಳನ್ನು ಮರೆತು ಹೋದ ಮನುಷ್ಯ ಗಾಯಗಳಲ್ಲಿ ನರಳುತ್ತ ಬದುಕು ಮುಗಿಸಿಕೊಳ್ಳುತ್ತಾನೆ ". ಇದನ್ನು ಯಾವತ್ತೂ ನೀ ಮರೆಯದಿರು !

15 August 2007

ಹಿರಿಯರಿಗೆ ಬರೆದ ಪತ್ರ

ಪ್ರೀತಿಯ ಹಿರಿಯರಿಗೆ ನಮಸ್ಕಾರಗಳು ,

ನಾನು ನಿಮ್ಮನ್ನೆಲ್ಲಾ ಬಹಳ ದಿನಗಳಿಂದ ನೋಡುತ್ತಿದ್ದು ನನ್ನ ಅರಿವಿಗೆ ಬಂದಿದ್ದು ಏನೆಂದರೆ ನಾನು ನಿಮ್ಮ ತರಹ ಇಲ್ಲ.ಸಮಾನ ವಯಸ್ಕರಾದರೂ ನಾನು ನಿಮ್ಮೆಲ್ಲರಿಗಿಂತ ಭಿನ್ನ ! " ಅಪರೂಪವಾದದ್ದು - ನಾಚಿಕೆಯಿಂದ ಬಳಲುವುದು " ಎನ್ನುವುದು ಸತ್ಯವಾದರೂ ನನ್ನ ಪಾಲಿಗೆ ಅದು ಮಿಥ್ಯ.ಅದಕ್ಕಾಗಿಯೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗಲೆಂದು ಈ ಮುನ್ನುಡಿ.

ನನಗೆ ಅನ್ನಿಸುವ ಪ್ರಕಾರ ನನ್ನ ಮಾನಸಿಕ ಬೆಳವಣಿಗೆ ನನ್ನ 14ನೇ ವರ್ಷದಂದು ನಿಂತು ಹೋಯಿತು.ಅದು ನಿಜ ಅನ್ನುವುದಕ್ಕೆ ಪೂರಕವಾಗುವಂತೆ ನನಗೆ ಈ ಕೆಳಗಿನ ಯಾವುದೇ ವಿಚಾರ ತಲೆ-ಬುಡ ಅರ್ಥವಾಗುವುದಿಲ್ಲ.
- ಹಣ
- ಗಿರವಿ ಇಡುವುದು
- ವ್ಯವಹಾರ
- ಕುಟುಂಬ
- ವಿಮಾ ಪಾಲಿಸಿ
- ಭೋಜನ ಕೂಟ
- ಮಹತ್ವಾಕಾಂಶೆ
- ಜನಸಂಪರ್ಕ
- ಗಾಳಿ ಸುದ್ದಿ

ಕ್ಷಮಿಸಿ, ನಿಮ್ಮ ಅಮೂಲ್ಯವಾದ ( ಹಣದಷ್ಟೆ ಕಾಲವೂ ಅಮೂಲ್ಯ ಎಂದು ನಿಮ್ಮಲೇ ಒಬ್ಬರು ಹೇಳಿದ ನೆನಪು ! )ಕಾಲವನ್ನು ನಾನು ನಿಮ್ಮಿಂದ ಕದಿಯಲು ನನಗೆ ಮನಸಿಲ್ಲದ ಕಾರಣ ಈ ಪತ್ರವನ್ನು ಈ ಮೊದಲು ಹೇಳಿದಂತೆ ಮುಂದಿನ ನನ್ನ ಕೊರೆತಕ್ಕೆ'ಮುನ್ನುಡಿ' ಎಂಥಲೇ ಭಾವಿಸಿ.

ಮತ್ತೆ ನಿಮ್ಮೆಲ್ಲರಿಗೆ ಬರವಣಿಗೆಯಲ್ಲಿಯೇ ಸಿಗುತ್ತೇನೆ.

ಪ್ರೀತಿಪೂರ್ವಕವಾಗಿ ,
- ಇಂತಿ ನಿಮ್ಮವ
ಅನಿಕೇತನ
(ವಯಸ್ಸು - 45 )

14 August 2007

ಚಮಚಾಗಿರಿ

ಚಮಚಾಗಿರಿ :
ನಮಗೆ ಅರಿವಿಲ್ಲದಂತೆ ವಾಕ್ಯದಲ್ಲಿರುವ ಒಂದು ಜೊತೆ ಶಬ್ದಗಳ ಅಕ್ಷರ ಬದಲಾವಣೆ ಮಾಡುವಿಕೆಗೆ 'ಚಮಚಾಗಿರಿ' ಎನ್ನಬಹುದು.

( spoonerism
1900, but perhaps as early as 1885, involuntary transposition of sounds in two or more words (cf. "a well-boiled icicle" for "a well-oiled bicycle;" "scoop of boy trouts" for "troop of Boy Scouts"), in allusion to the Rev. William A. Spooner (1844-1930), warden of New College, Oxford, who was famous for such mistakes. )

ಹಂದಿಯ ಮರಿ
ಮಂದಿಯ ಹರಿ

ವೀರಭದ್ರನ ಸರಸ ಸಲ್ಲಾಪ
ಸರಭದ್ರನ ವಿರಸ ಸಲ್ಲಾಪ

ಹರಿಯೇ ನಾ ತಾಳಲಾರೆ ಈ ಉರಿಯ
ಉರಿಯೇ ನಾ ತಾಳಲಾರೆ ಈ ಹರಿಯ

ಬಾಡಿಗೆಗೆ ತಂದ ಗಾಡಿ
ಗಾಡಿಗೆಗೆ ತಂದ ಬಾಡಿ

ಪೇಪರನ್ನು ಓದ್ರೊ ....
ಓಪರನ್ನು ಪೆದ್ರೊ !

10 August 2007

ಪುಟ ತೀರುವಿದಾಗ ....

ಹರೀಶ
ನಮ್ಮಯ
ವಾಚಾಳಿ ಗೆಳೆಯ ಗೃಹಸ್ಥ
" ಹರೀಶ "
ಅವನ ಮನೆಯಲಿ
ನಾವ್ ಕೂಗಿದರೆ ' ಹರೀ...'
ಬಂದ ಉತ್ತರ ಮಾತ್ರ ' ಶ್ ! '

(ತುಂಬಾ ಹಿಂದೆ ಗೃಹಸ್ಥಾಶ್ರಮ ಸೇರಿದ ವಾಚಾಳಿ ಗೆಳೆಯ ಹರೀಶನ ಕುರಿತು ಹಿಂದೊಮ್ಮೆ ಯಾವಾಗಲೋ ಗೀಚಿದ್ದು )

ಅವಶ್ಯಕತೆ
ಲೇಖಕ ಮದುವೆಯಾದ
ಹೇಳುತಾ
" ಜೀವನದಲಿ ಇದೆ
ಹೆಣ್ಣಿನ
ಅವಶ್ಯಕತೆ "
ದಾಂಪತ್ಯ ಜೀವನದ
ಸವಿ ಉಂಡು
ಬರೆಯುತಿರುವ
' ಆ - ವಿಷ - ಕಥೆ '

Both of these ಚುಟುಕು were written keeping in mind the beauty of ' oxymoron ' , Where contradictory terms are combined to give a special effects like “cruel kindness” or “to make haste slowly.”

09 August 2007

ಕನಸುಗಾರ

ತಿರುಗುವ ಫ್ಯಾನಿನ ಗಾಳಿ
ಆಹಾಹಾ..ಏನಿಂಥ ಚಳಿ
ಕಣ್ಣಾಯಿಸಿದಾಗ ಕಂಡದ್ದು ಚೌಕಟ್ಟು
ಮಧ್ಯದಲಿ ನಾ
ಮನದಿ ಮಂಥನಾ
ಒಬ್ಬಂಟಿ - ನಾ ಪರಿಹರಿಸೆ ಈ ಬಿಕ್ಕಟ್ಟು

ಭಾವನಾವೇಗದಿ ನಾ ಹಕ್ಕಿ
ವಾಸ್ತವದಿ ಅಲ್ಲಾ ನಾ ಸುಖಿ
ನೈಜತೆಯ ನೆರಳೂ ಇಲ್ಲ ಹತ್ತಿರ
ಭಾವನೆಗಳು ಸುಪ್ತ
ಅದರಲ್ಲಿ ನಾ ಲುಪ್ತ
ಏನೂ ವಾಸ್ತವವಾದಿಗೂ ಎನಗೂ ಅಂತರ ?

ತಿರುಗಾಡಿರಲು ಲೋಕ ನೂರಾರು
ನನ್ನ ಜೊತೆ ಇರದೆ ಬೇರೆ ಯಾರು
ಕನಸಿನ ಲೋಕದಿ ಬಣ್ಣದ ಆ ಒಕಳಿ
ತೀರದ ದಾಹ
ಕಾಡುವ ಮೋಹ
ಹೀಗೆಯೇ ಆಗಿದೆ ಜೀವನದ ಸವಕಳಿ

ಎಳೆಯ ಮನ ಕಂಡ ಕಷ್ಟ
ಆಗಿನಿಂದಲೇ ನಾ ರೋಗಿಷ್ಟ
ಅನಸ್ತೇಶಿಯಾದಂತೆ ಕನಸಾದಾಗ ವರ
ಕಾಲಕ್ಕೂ ಅತೀತ
ಭಾವನೆಗಳ ಸಮ್ಮೀಳಿತ
ನಾ ಬವಣೆಯ ಮಧ್ಯವೂ ಸುಖದ ಆಗರ

ಖರ್ಚಿಲ್ಲದೆ ಕಂಡ ಕನಸು
ಮುದಗೊಂಡ ನನ್ನ ಮನಸು
ಆವರಿಸಿದಾಗ ಕಷ್ಟ ಎಂಬ ಭಾರ
ಯೋಚಿಸಲು ಹೆದರಿ
ನಿರ್ಲಿಪ್ತತೆಯೆ ಸರಿ !
ಪರಿಹಾರ ಉಳಿಯಿತು ಬಹು ದೂರ

ವಾಸ್ತವತೆ ತಿಳಿದಾಗ ನಾ ಬೆಪ್ಪು
ಆವರಿಸಿರಲು ನನ್ನನು ಮುಪ್ಪು
ಕಂಡಿರುವೆ ನಾ ಕನಸಿನ ಹತ್ತಾರು ಮುಖ
ಬೇಡ ಮರೀಚಿಕೆ !
ಜೀವನದಿ ಏಕೆ ಅಂಜಿಕೆ
ವಾಸ್ತವತೆ ಅನುಭವಿಸಿ ನಾ ಪಡುವೆ ಸುಖ

08 August 2007

ನಿಶೆಯ ಆನಂದ

ಬೇಸಿಗೆ ರಾತ್ರಿಯ ನಿಶ್ಯಬ್ದ ವಾತಾವರಣ
ತಂದಿದೆ ದಣಿದ ಮನಕ್ಕೆ ಆಹ್ಲಾದತನ
ಈ ನಿಶಾಚರ ರಾತ್ರಿಗೆ ಇದೆ ತನ್ನದೆ ಬೆಡಗು ಬಿನ್ನಾಣ
ಇದೋ ...
ನಿದ್ದೆ ನೀಡುವ ಆ ಮುಗ್ಧ ಸುಖಕ್ಕೆ ನನ್ನ ನಮನ

03 August 2007

ಹೀಗೊಂದು ಕಥೆ

ಆ ಮನೆಯಲ್ಲಿ ಗಂಡ,ಹೆಂಡತಿ ಇಬ್ರೆ ಇರ್ತಿದ್ದ.
(ನಾನು ಇಲ್ಲಿ ಮೋಟುಗೋಡೆಯಾಚೆಯ ವಿಚಾರ ಹೇಳ್ತಾಇಲ್ಲೆ ! )
ಆ ದಿನ ಬೆಳಗಾ ಮುಂಚೆ ಹೆಂಡತಿ ಮೂರೆ ಮೂರು ದೋಸೆ ಮಾಡಿತ್ತು.
ಎರಡು ದೋಸೆ ಗಂಡಂಗೆ..ಮತ್ತೊಂದು ತಂಗೆ ಹೇಳಿ.
ಅಕಸ್ಮಾತ ಭಾವ ಬಂದ !
ಹೆಂಡತಿಗೆ ಚಿಂತೆ ಶುರು ಆತು ; ಮಾಡಿದ್ದು ಮೂರೇ ದೋಸೆ, ಹಿಟ್ಟೂ ಇಲ್ಲೆ.ಯಂತ ಮಾಡಕಾತು ಹೇಳಿ ಗಂಡನ ಹತ್ರ ಕೇಳ್ಚು.
ಗಂಡ ಹೇಳ್ದ - " ನೀ ಯಂತ ಚಿಂತೆ ಮಾಡಡ.ಯಂಗೆ , ಭಾವಂಗೆ ಮೊದ್ಲು ಆಸ್ರಿಗೆ ಹಾಕು.ಇಬ್ರಿಗೂ ಒಂದೊಂದು ದೋಸೆ ಹಾಕು. ಎರಡನೆ ದೋಸೆ ಮೊದಲು ಯನ್ನ ಹತ್ರ ತಗಂಡು ಬಾ.ಆನು ಯಲ್ಲ ನೋಡ್ಕ್ಯತ್ತಿ ".
ಹೆಂಡತಿ ಹಾಂಗೆ ಮಾಡ್ಚು.
ಒಂದೊಂದು ದೋಸೆ ತಿಂದಾದ ಮೇಲೆ ಎರಡನೇ ದೋಸೆ ಮೊದ್ಲು ಗಂಡನ ಹತ್ರ ತಗಂಡು ಹೋತು.
ಆವಾಗ ಗಂಡ ಹೇಳ್ದ - " ಎರಡು ದೋಸೆ ತಿನ್ನಲ್ಲೆ ಆನು ಯಂತ ಕತ್ತೆ ಹೇಳಿ ಮಾಡಿದ್ಯನೆ, ಭಾವಂಗೆ ಹಾಕು ".
ತಕ್ಷಣ ಭಾವ ಹೇಳ್ದ - " ಯಂಗೂ ಬ್ಯಾಡ, ಹೊಟ್ಟೆ ತುಂಬ್ಚು "
ಮೂರನೆ ದೋಸೆ ಹೆಂಡತಿಗೆ ಉಳತ್ತು.
ಹ್ಯಾಂಗೆ ಗಂಡನ idea ? ಚಲೋ ಇಲ್ಯ ?
( ಕೇಳಿದ್ದು ....)