09 August 2007

ಕನಸುಗಾರ

ತಿರುಗುವ ಫ್ಯಾನಿನ ಗಾಳಿ
ಆಹಾಹಾ..ಏನಿಂಥ ಚಳಿ
ಕಣ್ಣಾಯಿಸಿದಾಗ ಕಂಡದ್ದು ಚೌಕಟ್ಟು
ಮಧ್ಯದಲಿ ನಾ
ಮನದಿ ಮಂಥನಾ
ಒಬ್ಬಂಟಿ - ನಾ ಪರಿಹರಿಸೆ ಈ ಬಿಕ್ಕಟ್ಟು

ಭಾವನಾವೇಗದಿ ನಾ ಹಕ್ಕಿ
ವಾಸ್ತವದಿ ಅಲ್ಲಾ ನಾ ಸುಖಿ
ನೈಜತೆಯ ನೆರಳೂ ಇಲ್ಲ ಹತ್ತಿರ
ಭಾವನೆಗಳು ಸುಪ್ತ
ಅದರಲ್ಲಿ ನಾ ಲುಪ್ತ
ಏನೂ ವಾಸ್ತವವಾದಿಗೂ ಎನಗೂ ಅಂತರ ?

ತಿರುಗಾಡಿರಲು ಲೋಕ ನೂರಾರು
ನನ್ನ ಜೊತೆ ಇರದೆ ಬೇರೆ ಯಾರು
ಕನಸಿನ ಲೋಕದಿ ಬಣ್ಣದ ಆ ಒಕಳಿ
ತೀರದ ದಾಹ
ಕಾಡುವ ಮೋಹ
ಹೀಗೆಯೇ ಆಗಿದೆ ಜೀವನದ ಸವಕಳಿ

ಎಳೆಯ ಮನ ಕಂಡ ಕಷ್ಟ
ಆಗಿನಿಂದಲೇ ನಾ ರೋಗಿಷ್ಟ
ಅನಸ್ತೇಶಿಯಾದಂತೆ ಕನಸಾದಾಗ ವರ
ಕಾಲಕ್ಕೂ ಅತೀತ
ಭಾವನೆಗಳ ಸಮ್ಮೀಳಿತ
ನಾ ಬವಣೆಯ ಮಧ್ಯವೂ ಸುಖದ ಆಗರ

ಖರ್ಚಿಲ್ಲದೆ ಕಂಡ ಕನಸು
ಮುದಗೊಂಡ ನನ್ನ ಮನಸು
ಆವರಿಸಿದಾಗ ಕಷ್ಟ ಎಂಬ ಭಾರ
ಯೋಚಿಸಲು ಹೆದರಿ
ನಿರ್ಲಿಪ್ತತೆಯೆ ಸರಿ !
ಪರಿಹಾರ ಉಳಿಯಿತು ಬಹು ದೂರ

ವಾಸ್ತವತೆ ತಿಳಿದಾಗ ನಾ ಬೆಪ್ಪು
ಆವರಿಸಿರಲು ನನ್ನನು ಮುಪ್ಪು
ಕಂಡಿರುವೆ ನಾ ಕನಸಿನ ಹತ್ತಾರು ಮುಖ
ಬೇಡ ಮರೀಚಿಕೆ !
ಜೀವನದಿ ಏಕೆ ಅಂಜಿಕೆ
ವಾಸ್ತವತೆ ಅನುಭವಿಸಿ ನಾ ಪಡುವೆ ಸುಖ

No comments: