31 March 2008

Contemplation

Reflections from within:
Entry from my journal - dated 2008.03.31


It has just stopped raining.
The weather is still wet and one can feel the wetness with every breath they take.
Its gloomy spring noon with rain behind it. The water is dripping from the trees which silently stood in the onlash of the rain and cold. Now sheds the last remains of tears once poured as white petals of cherry flower.
whole pathway is covered with the white petals of Sakura fall.
The scene is enchanting with silence occassionally broken by water droplets falling down from the tree and birds making the call out to mates.

Standing by the side of the green watered pond with dim light from the sky illuminating the top of the sorrounding trees, I recall and relish the frog and pond haiku from Basho. It is from "Kawazu Awase" (Frog contest)....
And it goes like this;

Breaking the silence
Of an ancient pond,
A frog jumped into water-
A deep resonance


A deep relaxation and happiness has engulfed me. I feel complete for a moment.

(Spring day - It is the kind of day one often have in late March - so perfect that one wants it to last for ever)


ಮುಂದುವರಿಸುತ್ತಾ ಬರೆದದ್ದು ಈ ಸಾಲು:

ಕುಳಿರ್ಗಾಳಿಯ ಜೊತೆ ಬರುವ ನೆನಪು
ವಸಂತದಲ್ಲಿ ಮಳೆಯ ಭೋರ್ಗರೆತ
ಬಿಳಿಯ ಹಾಸನ್ನು ಹೊದ್ದು ಮಲಗಿದ ಈ ನೆಲ
ಖಿನ್ನತೆಗೆ ಗಾಂಭೀರ್ಯ ತಂದಿದೆ.

21 February 2008

ಸೇಬು ಹಣ್ಣಿನ ಸುತ್ತ ...

An apple a day keeps Doctor away ಎಂಬ ಮಾತು ಬಹುಕಾಲದಿಂದಲೂ ಪ್ರಚಲಿತವಿದೆ. ಆದರೆ ಈ ಮಾತು ನಿನ್ನೆಯ ದಿನಕ್ಕೆ ಮಾತ್ರ ಸೂಕ್ತ ಎಂಬುದು ಬಲ್ಲವರ ಅಂಬೋಣ. ಕಾರಣ ಅತಿ ವೇಗದಿಂದ ಬದಲಾಗುತ್ತಿರುವ ಇಂದಿನ 'ಗ್ಲೊಬಲ್ ವಿಲೆಜ' (ಈ ಶಬ್ದದ ಜನಕ - ಆಲ್ವಿನ್ ಟೊಫ್ಲರ್ - ಭವಿಷ್ಯದ ಬಗ್ಗೆ ಬಹಳಷ್ಟು ವಿಚಾರಗಳನ್ನು ತನ್ನ ಕಾಲದಲ್ಲಿಯೇ ಹುಟ್ಟುಹಾಕಿದವ),ವಿಶ್ವವೆಂಬ ಹಳ್ಳಿಯಲ್ಲಿ ಕಂಡುಕೇಳರಿಯದ ರೋಗರುಜಿನ ಕಲ್ಪನೆಗೂ ಮೀರಿ ಹುಟ್ಟುತ್ತಿವೆ. ಮನೆ ಮನೆಗೆ, ಹಳ್ಳಿಯಲ್ಲಿ ಸುದ್ದಿ ಹರಡುವ ವೇಗದಲ್ಲಿಯೇ ರೋಗವೂ ಹರಡಲುತ್ತಲಿದೆ. ಈ ಕಾರಣದಿಂದಲೇ ಇರಬೇಕು, ಒಬ್ಬ ಡಾಕ್ಟರ್ ತಮ್ಮ 'Waiting room' ಅಂದರೆ ರೋಗವಾಸಿಯಾಗುವುದೆಂದು ರೋಗಿ ನಿರಂತರವಾಗಿ ನಿರೀಕ್ಷಿಸುತ್ತಾ ಕುಳಿತು ಕೊಳ್ಳುವ 'ನಿರೀಕ್ಷಣಾ ಕೋಣೆ'ಯಲ್ಲಿ ಈ ಕೆಳಗಿನಂತೆ ಫಲಕ ಹಾಕಿರುವುದನ್ನು ನೋಡಿದ್ದೆ. 'An apple a day, doesn't do it. That's why you are here'(ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡದು ಅದಕ್ಕಾಗಿ ನೀವು ಇಲ್ಲಿದ್ದಿರಾ!) ಈಗಿನ ರಸಾಯನಿಕಗಳನ್ನು ಹಾಕಿ ಬೆಳೆಸಿದ ಸೇಬುಗಳು ಪೌಷ್ಟಿಕಾಂಶಕ್ಕಿಂತ ಹೆಚ್ಚಾಗಿ ಗಿಡ ಬೆಳೆಯಲು ನಾವು ಹಾಕಿದ ಕ್ರಿಮಿನಾಶಕ, ಕೀಟ ನಾಶಕ ರಸಾಯನಿಕಗಳನ್ನೇ ಹೆಚ್ಚಾಗಿ ಕುಡಿದು ಕೆಂಪಾಗಿರಬಹುದೆಂದು ಸ್ನೇಹಿತನೊಬ್ಬನ ಅಂಬೋಣ.

ನೀಚರು ಹಾಗೂ ಕಟುಕರು ಮಾತ್ರ ಸುಖದಿಂದ ಬದುಕಬಲ್ಲ ಇಂದಿನ ಜಗತ್ತಿನಲ್ಲಿ ಗೋಸುಂಬೆ ತರಹದ ಬುದ್ಧಿವಂತ ರೋಗದ ವಿರುದ್ಧ, ವೈದ್ಯರ ಫೀಸಿನ ವಿರುದ್ಧ ಪಾಪ, ಸಾಮಾನ್ಯ ಸೇಬುವಾದರೂ ಏನು ತಾನೆ ಹೊಡೆದಾಟ ಮಾಡಬಲ್ಲುದು? ಇಂದು ಯಾವುದೇ ರೋಗಕ್ಕಾದರೂ ವಿದೇಶಿ ವೈದ್ಯರೇ ಸರಿ ಎಂದು ಪುಡಾರಿಗಳು, ಸಿನೇಮಾ ತಾರೆಯರು , ಸಮಾಜದ (ನ)ಗಣ್ಯ ವ್ಯಕ್ತಿಗಳು ವಿದೇಶಯಾನ ಮಾಡುವ ಕಾಲ. ನಮ್ಮ ಮಂತ್ರಿ ಮಹೋದಯರು ವೈದ್ಯಕೀಯ ಖರ್ಚಿಗಾಗಿ ಲಕ್ಷಗಟ್ಟಲೆ ಸರಕಾರಿ ಹಣ ಉಪಯೋಗಿಸದರೆಂದು ಆಂಗ್ಲ ಪತ್ರಿಕಾ ವರದಿ. ಯಾವ ರೋಗಕ್ಕೆಂದು ವಿವರ ಲಭ್ಯವಿಲ್ಲ ( ಕೆಲವೊಂದು ರೋಗಗಳ ಹೆಸರು ಸಾರ್ವಜನಿಕ ಸ್ಥಳಗಳಲ್ಲಿ ಎತ್ತಬಾರದು ಎಂದು ಬಾಲಂಗೋಚಿಯ ಉದ್ಗಾರ ! ) ಎಂದು ಪತ್ರಿಕೆ ವರದಿ ಮಾಡಿದರೆ, ಯಾವ ವಿಚಿತ್ರ ರೋಗವೆಂದು ತಿಳಿಯದೆಂದು ವಿದೇಶಿ ವೈದ್ಯರು ಕೈಚೆಲ್ಲಿ ಕುಳಿತಿರ ಬಹುದು. ಹೀಗೆ ದೇಶಕ್ಕೆ ಹೊರೆಯಾಗಿ, ಮಧ್ಯಮ ಹಾಗೂ ಬಡವರ್ಗದ ಜನರ ಸಾಲದ ಹೊರೆ (ಕರದ ರೂಪದಲ್ಲಿ) ಹೆಚ್ಚುತ್ತಿರುವಾಗ ಸಾಮಾನ್ಯ ಜನರು ಸಾಲಗಾರರನ್ನು (ಹಾಗೂ ಜೊತೆಗೆ ಎಲ್ಲರನ್ನೂ) ದೂರವಿಡಲು 'An onion and a garlic a day will keep everyone away' ಬಾಯಿಯಿಂದ ಬರುವ ವಾಸನೆಯಿಂದ ಎಂದೆನ್ನಬಹುದೆನೋ? ಆದರೆ ಈಗ ತರಕಾರಿ ಬೆಲೆಯೂ ಮೇಲೆರುತ್ತಿರುವಾಗ ಅದೂ ಸಾಧ್ಯವಿಲ್ಲ. ಈ ಮಾತು "ಅಯ್ಯೋ, ಪಾಪ!" ಎಂದ್ಹೇಳಲು ಮಾತ್ರ ತಮ್ಮ ಕರುಣಾಸಾಗರವನ್ನು ಸೀಮಿತಗೊಳಿಸುವ (ಸಾಮಾನ್ಯ) ಸಮಾಜವನ್ನು ದೂರವಿಡಲು ಉಪಯೋಗಿಸಬಹುದು. "Where are all the good times gone" ಎಂಬ ಹಾಡನ್ನು ಕಟುಸಂಗೀತವೆಂದೇ ಸುದ್ದಿ ಮಾಡಿ ಯುವ ಜನಾಂಗ (ಜಾಣ ಕಿವುಡು ಯುವಜನಾಂಗಕ್ಕೆ ಅಂಟು ಕೊಂಡಿರುವ ರೋಗ ! )ದಲ್ಲಿ ಪ್ರಸಿದ್ಧಿ ಪಡೆದ Hard rock ಸಂಗೀತಕಾರನೊಬ್ಬ ಹಾಡಿದನೆಂಬ ನೆನಪು.(ವಿಮರ್ಶಾಕಾರರು Hardrock ಹುಟ್ಟಿದ ದಿನದಿಂದಲೇ ಸಂಗೀತಕ್ಕೆ ಒಳ್ಳೆಯ ದಿನಗಳು ಎಲ್ಲಿ ಹೋದವು ಎಂದು ಕೇಳುವ ಪರಿಸ್ಥಿತಿ ಬಂದಿದೆ ಎಂದಿದ್ದರು) ಈಗ ನಾವು ಅದೇ ಮಾತು " ಒಳ್ಳೆಯ ದಿನಗಳು ಎಲ್ಲಿ ಹೋದವು?" ಎಂದು ಕೇಳಲು ಇದು ಯೋಗ್ಯ ಸಮಯ. ಇಂದು ಪ್ರತಿ ರೋಗಕ್ಕೂ ತಲೆ, ಬಾಲ ಸೇರಿ ಹೊಸದಾದ ಹೆಸರೂ ಹಾಗೂ ವ್ಯಕ್ತಿತ್ವ ಬಂದಿದೆ. ಜೊತೆಗೆ ಚಿಕಿತ್ಸೆಗೆ ಅಷ್ಟೇ ಹಣವನ್ನು ನಮ್ಮಿಂದ ಹೊರಕಕ್ಕಿಸುವ ಬಲವೂ. Made for each other (ಒಬ್ಬರಿಗಾಗಿ ಇನ್ನೊಬ್ಬರು) ಎನ್ನುವಂತೆ ಇರುವ ವೈದ್ಯ ಹಾಗೂ ಔಷಧಿ ಕಂಪನಿ ಇಬ್ಬರಿಗೂ ಜೀವನಾಡಿಯಾಗಿದೆ. ಮಾನವ ಅದಕ್ಕೂ ಜಪ್ಪಯ್ಯ ಎನ್ನದೆ ತನ್ನ ಜೀವನದಲ್ಲಿ ರೋಗದ ನೆರಳು ಬೀಳದಂತೆ ಮಾಡಲು ಸಮರವನ್ನೇ ಸಾರಿದ್ದಾನೆ.

' ದೇವರು ದೊಡ್ಡ ಸೈನ್ಯದ ಜೊತೆ ನೀಡುತ್ತಾನೆ' ( God is on the side of Big battalion ) ಎಂದು ಫ್ರೆಂಚರ ದಂಡನಾಯಕ ನೆಪೋಲಿಯನ್ ಹೇಳಿದ ಮಾತು ಇಲ್ಲಿಗೂ ಅನ್ವಯಿಸುವುದು. ಮಾನವ ಇಂದು ಹೊಡೆದಾಟ ನಡೆಸುತ್ತಿರುವುದು ಕಂಡು, ಕೇಳರಿಯದಷ್ಟು ಅಗಾಧವಾದ ಸೂಕ್ಷಾಣು ಜೀವ ಸಾಮ್ರಾಜ್ಯದ ಎದುರು. ಅದಕ್ಕೆ ಜೊತೆ ನೀಡುತ್ತಿರುವುದು ನಮ್ಮ ಒಳ ಹೊರ ಎಲ್ಲವನ್ನೂ ಬಲ್ಲ ನಮ್ಮ ನಿಸರ್ಗ. ನಮ್ಮ ಗುಟ್ಟೆಲ್ಲವನ್ನೂ ತಿಳಿದ ಮಿತ್ರ ಶತ್ರುವಿನ ಜತೆ ನೀಡಿದರೆ ಫಲಿತಾಂಶ ಏಕಮುಖಿ. ಅದರಂತೆ ಜೀವಸಂಕುಲದ ಸಮತೋಲನವನ್ನು ಸರಿಯಾಗಿ ತೂಗಿಸಿ ಕೊಂಡು ಹೋಗುವ ' ಮಹಾತಾಯಿ ' ಪ್ರಕೃತಿ ಮುಂದಿನ ಶತಮಾನಗಳಲ್ಲಿ ಯಾವ ಆಶ್ಚರ್ಯವನ್ನು ಬರುವ ಮಾನವ ಸಂಕುಲಕ್ಕೆ ಕಾದಿರಿಸಿದ್ದಾಳೆ ಎಂದು ಕಾಲದ ಪರಿವೆಯೇ ಇಲ್ಲದ ಕಾರ್ಯ ನಿರ್ವಾಹಕ ಕಾಲನೇ ಹೇಳಬಲ್ಲನು.

(ಬೆಳಕನ್ನು ಕಾಣದ ಲೇಖನ - ಖಾಸಗಿ ಪ್ರಸಾರಕ್ಕೆ (Private Circulation ಗೆ ಇಟ್ಟದ್ದು !)

-----------------------------

ಬರೆದ ಕಮೆಂಟಿನ್ನು ಮುಂದಿಟ್ಟುಕೊಂಡು ಮುಂದುವರೆಸಿದ್ದು !

sunaath ಧನ್ಯವಾದಗಳು ... ನೀವು ಹೇಳಿದಂತೆ Grin and Bear it ನಿಜಕ್ಕೂ ಚೆನ್ನಾಗಿದೆ ...

( Grin and Bear it - to accept an unpleasant or difficult situation because there is nothing you can do to improve it. )




08 February 2008

ಎರವಲು ಪಡೆದಿದ್ದು

# ಈ ಪುಸ್ತಕದ ಬಹುದೊಡ್ಡ ದೋಷವೆಂದರೆ ಓದುಗನಾದ ನೀನೆ.
ನಿನಗೆ ವಯಸ್ಸಾಗುವ ಅವಸರ.
ಆದರೆ ಈ ಪುಸ್ತಕ ನಿಧಾನವಾಗಿ ಮುಂದುವರೆಯುತ್ತದೆ.
ನಿನಗೆ ನೇರವಾದ, ಸಾಕಷ್ಟು ಸತ್ವವುಳ್ಳ ಕತೆ ಇಷ್ಟ. ಜೊತೆಗೆ ಸರಳವಾದ ಶೈಲಿ ಬೇಕು.
ಆದರೆ ಈ ಪುಸ್ತಕ ಮತ್ತು ನನ್ನ ಶೈಲಿ ಕುಡುಕರ ಹಾಗೆ ಎಡವುತ್ತಾ ಮುಗ್ಗರಿಸುತ್ತದೆ.

# ನನ್ನ ಕಳೆಬರದ
ತಣ್ಣಗಿನ ಮಾಂಸವನ್ನು ಅಗಿದು
ತಿನ್ನುವ ಮೊದಲ ಹುಳುವಿಗೆ
ಈ ಮರಣೋತ್ತರ ಸಂಸ್ಮರಣೆಯನ್ನು
ಪ್ರೀತಿಯಿಂದ ಅರ್ಪಿಸುತ್ತೇನೆ.

# ಇನ್ನೊಬ್ಬರ ಹೊಟ್ಟೆಯಲ್ಲಿರುವ ನೋವನ್ನು ನಾವು ಅನಾಯಾಸವಾಗಿ, ಅತ್ಯಂತ ತಾಳ್ಮೆಯಿಂದ ಸಹಿಸಿಕೊಳ್ಳಬಹುದು.

# ನಾವು ಕಾಲವನ್ನು ಕೊಲ್ಲುತ್ತೇವೆ.
ಕಾಲ ನಮ್ಮನ್ನು ಹೂತು ಬಿಡುತ್ತದೆ.

(ಬ್ರೆಜಿಲ್ಲನ ಬರಹಗಾರ - ಮಜಾದೊ ದ ಅಸಿಸ್ ನ 'Epitaph of a small winner' ಪುಸ್ತಕದಿಂದ ಆಯ್ದದ್ದು )

30 January 2008

ಹಣ (ಕವನ)

(ಊರೂರು ತಿರುಗುವ ಸಾಧುಗಳು ನೋಡಿ ಪ್ರೇರಿತವಾಗಿ ಬರೆದ ಈ ಕವಿತೆ ನನ್ನ ಪುಟ ಹಳದಿಯಾದ ನೋಟಪುಸ್ತಕದ ಒಂದು ಪುಟವ ಅಲಂಕರಿಸಿತ್ತು ಇಷ್ಟು ದಿನ. ಇಂದೆಕೋ ಮತ್ತೋಮ್ಮೆ ಆ ಹಳೆಯ ಪುಟಗಳ ಸೆಳೆತೆ ಜಾಸ್ತಿಯಾದ ಕಾರಣ ಪ್ರೀತಿಯಿಂದ ತಿರುವಾಡಿದಾಗ ಕಣ್ಣಿಗೆ ಬಿತ್ತು. )

ಎಲ್ಲೆಲ್ಲೂ ನಾ ಕಾಣುತಿರುವೆ ಹಣ
ಅದಿಲ್ಲದೆ ಜೀವನ ಆಗಿದೆ ಬಣಬಣ
ನಂಬಿದರೆ ಕಾಯಕವೇ ಕೈಲಾಸ
ಬಿಡದು ನಂಟು ಗುಡಿಸಲ ವಾಸ

ಇನ್ನೊಬ್ಬರ ಮೂರ್ಖತ್ವ ಕ್ಯಾಶ ಮಾಡುವ ಕಲೆ
ತಿಳಿದಿರಲು ನಿನಗೆ ನಾ ಹೇಳುವೆ 'ಭಲೇ!'
ಈ ಭೂಮಿತಾಯಿಯ ಮೇಲೆ ಆಣೆ
ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ *

ಹಣದಿಂದಲೇ ಬರುವ ಆ ಅಂತಸ್ತು
ಅದಿದ್ದವನದೇ ಈಗ ಎಲ್ಲ ಗತ್ತು
ಮನಕ್ಷೋಭೆಯಲಿ ಆಗುವರು ಹೆಣ
ಗಗನಕುಸುಮವಾಗಿರಲು ಕಾಂಚಾಣ

ಮಧ್ಯಮ ವರ್ಗದವರನು ಬಿಡದ ಬವಣೆ
ಇದ್ದಿರಲು 'ಮರ್ಯಾದೆ' ಎಂಬ ಪರದೆ
ಬಡವ,ಸಿರಿವಂತರಲಿ ಇದನು ನಾ ಕಾಣೆ
ನೆನಪಿರಲಿ 'ಮಧ್ಯಮನೆ ಅಧಮ' ಗಾದೆ

ಕೈಗೂಡದಿರಲು ಹಣ ಎಂಬ ಸಂಗಾತಿ
ನಾ ತಿರುಗುತಿರುವೆ ಬಳಿದುಕೊಂಡು ವಿಭೂತಿ

* ( ಇನ್ನೊಬ್ಬರನು ಮೂರ್ಖರ ಮಾಡುವುದು ಊರೂರು ತಿರುಗುವ ಸಾಧು, ಸಂತರ ವರ್ತನೆ ಅಂಥ ಭಾವಿಸಬಾರದು. ಕವನಕ್ಕೆ ಬೇಕಾದ ತ್ರಾಸ, ಪ್ರಾಸಕ್ಕೆ ಇಲ್ಲಿ ಅದರ ಬಳಕೆ ಆಗಿದೆ. ಹಾಗೆಯೇ 'ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ' ಎನ್ನುವುದು ಒಬ್ಬ ಜೀವವನದಲ್ಲಿ ಅತಿಯಾಗಿ ನೊಂದ, ಕಷ್ಟವನ್ನೆ ಕಂಡ ಮನುಷ್ಯನಿಂದ ಬರುವ ಸಹಜವಾದ ದೂರು ಎನ್ನುವಂತೆ ಇಲ್ಲಿ ಹೇಳಲಾಗಿದೆ.)

29 January 2008

(ಇಲ್ಲದ) ಆ ಹೆಣ್ಣಿಗೆ !

( ಈ ಕವಿತೆ ಬರೆದಿದ್ದು ಜೂನ್-1996 ರಲ್ಲಿ. ಇನ್ನೂ ಬ್ಲಾಗಿನ ಪರಿಚಯ ನನಗಿರದ ಸಮಯದಲ್ಲಿ. ಇಂದು ನನ್ನ ಹಳೆಯ ನೋಟ ಬುಕ್ಕ ತಿರುವುತ್ತಾ ಇದ್ದಾಗ ನೆನಪಿನ ಅಂಗಳದಲ್ಲಿ ಸಿಕ್ಕ ಹಳೆಯ ಕವಿತೆ ಇದು. 1996 ರಲ್ಲಿ ಕವಿತೆ ಬರೆಯುವ ಉತ್ಸಾಹ ಎಷ್ಟಿತ್ತೆಂದರೆ ಆ ಸಮಯದಲ್ಲಿ ಗದ್ಯಕ್ಕಿಂತ ಪದ್ಯವನ್ನೇ ಬರೆದಿದ್ದು ಜಾಸ್ತಿ. ಆ ಸೃಜನಶೀಲತೆ ಬಹಳ ಕಮ್ಮಿ ಅವಧಿ ಜೊತೆ ನೀಡಿದ್ದು ನನ್ನ ನೋಟಬುಕ್ಕಿನೆ ಪುಟ ತಿರುವಿದಾಗ ಯಾರಿಗಾದರೂ ಗೊತ್ತಾಗುತ್ತೆ. ಇಂದು ಖಾಲಿ ಹಾಳೆ ನನ್ನನ್ನು ಅಣುಕಿಸುತ್ತಿದ್ದರೆ, ನಾನು ನನಗೆ ಸಂಬಂದವೇ ಇಲ್ಲ ಅನ್ನುವಷ್ಟು ನೀರ್ಲಪ್ತ ಹಾಗೂ ನಿರ್ಲಜ್ಜ . Somewhere, something is wrong ... I don't know )

ಹೇ, ನೆರೆಮನೆಯ ಹೆಣ್ಣೆ
ನೀನೇ ನನ್ನ ಬದುಕಿನ ಕಣ್ಣೆ!
ನಿನ್ನ ನೆನೆಯುತ ನಾನು
ಎಲ್ಲವ ಮರೆತೆ
ಇರಲು ಒಂದೇ ಚಿಂತೆ,
" ನನ್ನಿಂದ ದೂರವೇಕೆ ನೀನು? "

ನಿನ್ನ ನಗುಮುಖವನ್ನ
ದಿನವೂ ನೋಡಲೇಷ್ಟು ಚೆನ್ನ!
ಆ ತುಂಟ ಕಣ್ಣಿನ ನೋಟ
ಎಲ್ಲರಲೂ ನಾ ಕಾಣೆ
ನನ್ನ ದೇವರಾಣೆ
ನಿನ್ನ ನೋಡದೆ ಸೇರದು ಊಟ

ನೀನು ಹೋಗಲು ದೂರ
ನಾ ನಿತ್ರಾಣಗೊಂಡ ಶೂರ
ಬಿಟ್ಟು ಬಾ ನಿನ್ನ್ ಒಣ ಬಿಗುಮಾನ
ನಿನ್ನ ದಾರಿ ಕಾಯುತ
ನಿಂತಿರಲು ನಾ ಅನವರತ
ಅಂಧಕಾರದಲಿ ಇರುವ ಚಂದ್ರ ನಾ

ದಿನವೂ ಕಣ್ಣುಮುಚ್ಚಾಲೆ ಆಟ
ಇರಲು ನಿಮ್ಮಪ್ಪನ ಕಾಟ
ಮನೆಯಲಿ ಆತನ ಗೈರು ಹಾಜರಿ
ತಂದಿರುವ ಕಳೆ ವಿಶೇಷ
ಎಷ್ಟು ದಿನವೀ ಸಂತೋಷ
ತಿಳಿಯದಿರೆ ನಾ ಕಥಾಂತ್ಯದ ಪರಿ

21 January 2008

ಕೋಳಿ ಹಾಗೂ ತಮಾಗೋ

ಜಪಾನಿಗರ ಎಲ್ಲವನ್ನೂ ಸಣ್ಣದಾಗಿಸುವ ಗೀಳಿಗೆ ಪಿಯಾನೋ, ನಾನೋ ಟಾಯ್ಲೆಟ್ ಇತ್ತಿಚಿನ ದಿನಗಳಲ್ಲಿ ಸೇರ್ಪಡೆಯಾದದ್ದು. ಮರಗಿಡದೊಂದಿಗೆ ನಿಸರ್ಗವನ್ನು ಪ್ರೀತಿಸುವ ಹಾಗೂ ಆರಾಧಿಸುವ 'ಶಿಂಟೊ'ಧರ್ಮಾನುಯಾಯಿಗಳ ನಾಡಾದ ಇಲ್ಲಿ ಮರವನ್ನು ಕುಭ್ಜವಾಗಿಸುವ 'ಬೊನ್ಸೈ' ಕಲೆ ಕರತಲಾಮಲಕ ಹಾಗೂ ತಲತಲಾಂತರದಿಂದ ಬಂದಿದ್ದು.

ಎಲ್ಲವನ್ನೂ ಸಣ್ಣದಾಗಿಸಿ ನೋಡುವ ಇವರ ಗೀಳಿಗೆ ವ್ಯತಿರಿಕ್ತವಾಗಿ ಕಂಡಿದ್ದು MacDonalds ನಲ್ಲಿ ಸಿಗುವ MegaTamago (ದೊಡ್ಡ ತತ್ತಿ(ಮೊಟ್ಟೆ)). ಅದರ ಜೊತೆ ಪರಿಚಯಿಸಿದ್ದು MegaMac. ಈ ಮೆಗಾಮ್ಯಾಕ ತಿಂದು ಹೊಟ್ಟೆ ತುಂಬುವುದು ನಿಜವಾದರೂ ದವಡೆ ಜರಿದು ದವಾಖಾನೆ ಸೇರಿದವರ ಲೆಕ್ಕವೂ ಹೆಚ್ಚಾದಂತೆ ತೋರುತ್ತದೆ.




ಈ 'ದೊಡ್ಡತತ್ತಿ'ಗೆ ಬೇಕಾದಂತಹ ಮೊಟ್ಟೆ ಕೇವಲ ಆನುವಮಂಶಿಕವಾಗಿ ಬದಲಾವಣೆಗೊಂಡ ದೊಡ್ಡ ಕೋಳಿಯಿಂದ ಬಂದಿರಬಹುದೆಂದು ಒಂದು ಊಹೆ ಇದೆ.
ಕಾಲವೇ ಎಲ್ಲವನ್ನೂ ಹೇಳಬಲ್ಲುದು.

ಆ ಮೊಟ್ಟೆಗಳ ಪಿತ ಈ ಹುಂಜವೇ ಇರಬಹುದೆನೋ?



ದಿನಚರಿ: ದಿನ-334

17 December 2007

ವಾರ್ಷಿಕ ವ್ಯಸನ

ವರ್ಷ ಮುಗಿಯುತ್ತಾ ಬಂದ ಹಾಗೆ ನೆನಪಾಗುವುದು Bob Geldof ಎನ್ನುವವ ಹೇಳಿದ ಮಾತು: "ಇದು ಕ್ರಿಸ್ಮಸ್ ಸಮಯ. ಹೆದರಿಕೆ ಪಡುವ ಯಾವುದೇ ಕಾರಣವಿಲ್ಲ". ಆದರೆ ಜಪಾನಿನಲ್ಲಿ ಇದು ನೀವು ಅತಿ ಕಾಳಜಿಯಿಂದ ಇರಬೇಕಾದ ಸಮಯ. ರಸ್ತೆಯಲ್ಲಿ ಸುರಕ್ಷಿತವಾಗಿ ತಿರುಗುವುದು ಪಾದಚಾರಿಗಳ ಕೆಲಸ ಎಂದರೆ ತಪ್ಪೇನೂ ಇಲ್ಲ. ರಸ್ತೆಯ ಮೇಲೆ ತಿರುಗುವಾಗ ಅತಿ ಕಾಳಜಿಯಿಂದ ತಿರುಗಬೇಕು. ಇಲ್ಲವಾದಲ್ಲಿ ಕುಡಿದು ತೂರಾಡುವವರ ನೆರೆ ಹಾವಳಿಯಲ್ಲಿ ಸಿಲುಕುವ ಎಲ್ಲ ಚಾನ್ಸಸ್ ನಿಮ್ಮದು. ರಸ್ತೆ ಉದ್ದ, ಅಗಲ ಅಳೆಯುವವರ ಸಂತೆ ಸರ್ವೇ ಸಾಮಾನ್ಯ. ಉದ್ಯೋಗದಲ್ಲಿರುವವರ ಅತಿ ಪ್ರೀತಿಯ ಕೆಲಸ ಕುಡಿತ ಅಂತ ಕಾಣಿಸುತ್ತೆ ಇಲ್ಲಿ. ತಮ್ಮ ದೇಹದ ಅಂಗ ಎಷ್ಟು ತೆಗೆದುಕೊಳ್ಳಲು ಸಾಧ್ಯವೋ ಅದಕ್ಕೂ ಮೀರಿ ಕುಡಿಯುವುದು ಇಲ್ಲಿಯವರ ಪರಿಪಾಟ ಅನ್ನಿಸುತ್ತೆ.

ಇದಕ್ಕೆ ಕಾರಣ ಸರಿ ಸುಮಾರು ಎಲ್ಲ ಕಂಪನಿಗಳೂ ತಮ್ಮ ಕೆಲಸಗಾರರಿಗೆ ಡಿಸೆಂಬರ ತಿಂಗಳಲ್ಲಿ ಆ ವರ್ಷವ ಮರೆಯಲು ನೀಡುವ ಪಾನಗೋಷ್ಠಿ. ಮಜದ ವಿಚಾರವೆನೆಂದರೆ ಬಹಳ ಜನ ವರ್ಷವ ಮರೆಯುವದೊಂದಿಗೆ ತಮ್ಮ ಹೆಸರು, ಮನೆಗೆ ಹೋಗುವ ದಾರಿ ಹಾಗೂ ತಮ್ಮ ನೈಸರ್ಗಿಕ ಕ್ರಿಯೆಯ ಮೇಲಿನ ಹತೋಟಿ ಎಲ್ಲವನ್ನು Temporaryಯಾಗಿ ಕಳೆದುಕೊಂಡಿರುತ್ತಾರೆ !

ಈ ವಾರ್ಷಿಕ ಪಾರ್ಟಿಯ ಹೆಸರು – ‘ಬೊನೆನ್ ಕೈ ಪಾರ್ಟಿ’. ಜಪಾನಿಗರು ಆಂಗ್ಲ ಭಾಷೆಯಿಂದ ಎರುವಲು ಪಡೆದ ಶಬ್ಧದ ರೂಪಾಂತರ ಇದು. ಮೂಲ ಪದ – “ Bonkers “. ಕಾನೂನಿನ ಕಾಳಜಿ ಇಲ್ಲದೆ , ಜನರ ಹುಚ್ಚು ನಡತೆಗೆ ಅತಿ ಹತ್ತಿರದ ಶಬ್ದ ಇದು.

ಜನರು ನೀರಿನಂದದಿ ಕುಡಿಯುವುದು ಇದು :




ಮನೆಗೆ ಹೋಗುವ ಒಂದು ಶೈಲಿ – ರೈಲಿನಲ್ಲಿ :



ಮತ್ತು ಬಾಗಿಲಿನಲ್ಲಿ ಮೂಡಿದ ಚಿತ್ತಾರ !


10 November 2007

ಬಾಳ ಪುಟದಿಂದ ೦.೧



ನಾನು ಒಂದು ವೇಳೆ ....
ನನ್ನ ಮುಂದಿನ ದೊಡ್ಡಸ್ತಿಕೆಯ ಬಗ್ಗೆ ಆಲೋಚಿಸದಿದ್ದರೆ,
ಮತ್ತು ಸುತ್ತಲಿನ ಹಸಿರಿನ ಬಗ್ಗೆ ಹಾಗೂ ಕಟ್ಟಡದ ಹೊಸ ಕಣ್ಣಿನಲ್ಲಿ ನೋಡಿದ್ದರೆ,
ಮತ್ತು ನನ್ನ ಸುತ್ತಮುತ್ತಲಿರುವವರ ಜೊತೆ ಕೈಜೋಡಿಸಿದ್ದರೆ,
ಮತ್ತು ಹಂಚಿನ ಮೇಲೆ ಬಿದ್ದ ಮಳೆ ಹನಿಯ ಶಬ್ದವ ಆಲಿಸಿದ್ದರೆ,
ಮತ್ತು ಮೊದಲ ಮಳೆಯ ಮಣ್ಣಿನ ವಾಸನೆ ತೆಗೆದುಕೊಂಡಿದ್ದರೆ,
ಮತ್ತು ಕ್ಷಣಕಾಲ ನನ್ನ ಮೇಲೆ ನಾನು ಹಾಕಿಕೊಂಡ ಕಟ್ಟುಪಾಡು ತೆಗೆದಿದ್ದರೆ,
ಮತ್ತು ನನ್ನ ಬಾಳಸಂಗಾತಿಯ ಹೆಗಲ ಮೇಲೆ ಕೈಹಾಕಿ ಹಿಡಿದುಕೊಂಡಿದ್ದರೆ,

ಹೌದು...... ಇದ್ಯಾವುದಕ್ಕೂ ಇನ್ನೂ ಕಾಲ ಮೀರಿಲ್ಲ !


-------------------------------------------------------------

ಈಗ ಮುಂಜಾವು.

ನನ್ನ ಕೈಯ್ಯಲ್ಲಿದೆ ಇನ್ನೊಂದು ಕರಗದ ದಿನ.
ಇನ್ನೊಂದು ದಿನ- ಕೇಳಲು ಹಾಗೂ ಪ್ರೀತಿಸಲು,
ಕಳೆದುಕೊಳ್ಳಲು ಹಾಗೂ ವೈಭವತೆಯನ್ನು ನೋಡಲು.
ನಾನು ಇನ್ನೊಂದು ದಿನಕ್ಕಾಗಿ ಇಲ್ಲಿದ್ದೇನೆ.

ನಾನು ಈ ಮುಂಜಾವಿಗೆ ಇರದವರ ಬಗ್ಗೆ ಆಲೋಚಿಸುತ್ತಿದ್ದೇನೆ.

ನಾನು ಈ ದಿನವ ಏನನ್ನೂ ಬಯಸದೇ ಬದುಕುವೆ.
ನಾನು ಕೇವಲ ಬದುಕಲು ಬಯಸುವೆ.

-------------------------------------------------------------

ನಮ್ಮ ಜೀವನವು ಸಣ್ಣ ಸಣ್ಣ ವಾದ ವಿವಾದಗಳಲ್ಲಿ ನಲುಗಿಹೋಗಿತ್ತು. ಆದರೆ ಈಗ ನಾವು ವಾದ ವಿವಾದ ಯಾವುದರ ಬಗ್ಗೆ ಎಂದು ತಿಳಿಯಲು ದೊಡ್ಡದಾಗಿ ವಾದ ವಿವಾದ ಮಾಡುತ್ತೇವೆ.

08 November 2007

ನಾನು ಮತ್ತು ಪುಸ್ತಕ

ಟ್ರೈನಿನಲ್ಲಿ ಕೆಲಸಕ್ಕೆ ಬರುತ್ತಿರುವಾಗ ಪಕ್ಕದಲ್ಲಿ ನಿಂತ ಸಣ್ಣ ಕಣ್ಣಿನ ಆಸಾಮಿ ಆಯತಪ್ಪಿ ಬಿದ್ದಾಗಲೇ ನಾನು ನನ್ನ ಪುಸ್ತಕದ ಪರಿಧಿಯಿಂದ ಹೊರ ಬಂದಿದ್ದು. ಕಣ್ಣು ಮುಚ್ಚಿ ನಿಂತಿರುವವರು, ಸಿಕ್ಕ ಸಣ್ಣ ಜಾಗದಲ್ಲಿಯೇ ತಮ್ಮದೆ ಆದ ಭ್ರಮಾ ಲೋಕ ಸೃಷ್ಟಿಸ ಬಲ್ಲ ಪುಸ್ತಕ ಪ್ರೇಮಿಗಳು , ಕಣ್ಣು ಮುಚ್ಚಿ ಸದಾ ಸಂಗೀತ ಲೋಕದಲ್ಲಿ ವಿಹರಿಸುವವರು ಮುಂತಾದ ತಮ್ಮ ಸ್ವಂತ ಜಗತ್ತಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರನ್ನು ಹೊತ್ತ ಮೆಟ್ರೊ ಟ್ರೇನಿಗೆ ಗಮ್ಯ ತಲುಪುವ ತವಕ.

ಪುಸ್ತಕ ಹಿಡಿದು ಕಾಲದ ಸದುಪಯೋಗ ಪಡೆಯುವವರಲ್ಲಿ ನಾನೂ ಒಬ್ಬ. ನನ್ನ ಪುಸ್ತಕ ಪ್ರೇಮ, ನನಗೆ ತಗಲಿ ಹಾಕಿಕೊಂಡಿದ್ದು ನನ್ನ ಶಾಲಾ ದಿನದಲ್ಲಿ. ಬೊಂಬೆಮನೆ, ಚಂದಮಾಮ, ಬಾಲಮಿತ್ರದೊಂದಿಗೆ. ನನ್ನ ಓದುವ ಗೀಳಿಗೆ ನನ್ನ ತಂದೆ ಹಾಗೂ ಅಗ್ರಜನಿಂದ ಪ್ರೋತ್ಸಾಹದಾಯಕವಾಗಿ ಸದಾ ನನ್ನ ಜೋಳಿಗೆ ಪುಸ್ತಕದಿಂದ ತುಂಬಿರುತ್ತಿತ್ತು. ಅಲ್ಲಿನಿಂದ ಶುರುವಾದ ಪುಸ್ತಕದ ಹಿಂದಿನ ಓಟ ಇನ್ನೂ ಮುಗಿದಿಲ್ಲ. ಅದೊಂದು ಜೀವನ ಪರ್ಯಂತದ ಓಟ - Marathon for Lifetime.

- - - - - - - - - - - - - - - - - -

ಚಿಕ್ಕವನಿದ್ದಾಗ ಮುಂದೆ ಎನಾಗಬೇಕು ಎನ್ನುವ ಆಶೆಯಲ್ಲಿ ಗ್ರಂಥಪಾಲಕನಾಗುವ ಆದಮ್ಯ ಆಶೆಯೂ ಒಂದಾಗಿತ್ತು. ಕಾಲದ ಗತಿಯಲ್ಲಿ ಬದಲಾವಣೆಯ ಗಾಳಿಯಲ್ಲಿ ಮೂಲ ಸ್ವರೂಪ ಕಳೆದುಕೊಂಡು ಇಲ್ಲಿಗೆ ಬಂದು ತಲುಪಿ ಆಗಿದೆ. ಆ ಮುಗ್ಧ ನೆನಪುಗಳ ಗಾಳಿ ಬಿಸಿದಾಗ ಖುಷಿಯಾಗುವುದಂತೂ ಖಂಡಿತ.

- - - - - - - - - - - - - - - - - -

ಟೊಕೀಯೊಗೆ ಬಂದ ನಂತರ ಇಲ್ಲಿ Alien Registration Card ಹಾಗೂ ವರ್ಕ ಪರ್ಮಿಟ್ ಸಿಕ್ಕ ನಂತರ ಮೊದಲು ಮಾಡಿದ ಕೆಲಸ ಲೈಬ್ರರಿ ಕಾರ್ಡ ಮಾಡಿಸಿದ್ದು. ಇಲ್ಲಿ ಪ್ರತಿ ಗ್ರಂಥಾಲಯದಲ್ಲಿಯೂ ಪುಸ್ತಕ ಉಚಿತ. ಆ ಗ್ರಂಥಾಲಯದ ಕಾರ್ಡ್ ಇದ್ದರೆ ಆಯಿತು. ಪ್ರಸ್ತುತ ನನ್ನ ಬಳಿಯಲ್ಲಿ ಎರಡು ಕಾರ್ಡ್ ಇದೆ. ನಾನು ಖಾಯಂ ಹೋಗುವುದು ಹಿಬಿಯಾ ಗ್ರಂಥಾಲಯಕ್ಕೆ. ಒಟ್ಟಾರೆ ೧೦ ಪುಸ್ತಕ ಉಚಿತ. ೨೧ ದಿನಗಳ ಎರವಲು ದಿನ. ಹಾಗೆಯೇ ಸಾಂದ್ರ ಬಿಲ್ಲೆ ( CD ) ಯೂ ಎರವಲು ಸೇವೆಯಲ್ಲಿ ಇದೆ. ಆದರೆ ಕೇವಲ ೫ CD , ೧೫ ದಿನಗಳ ಕಾಲ. ಆಂಗ್ಲ ಭಾಷೆಯ ವಿಭಾಗ ಗ್ರಂಧಾಲಕ್ಕೆ ಹೋಲಿಸಿದರೆ ಸಣ್ಣದೆನಿಸಿದರೂ ಒಳ್ಳೆಯ ಸಂಗ್ರಹ ಇದೆ. ಭಾರತದಲ್ಲಿ ಬಹಿಷ್ಕಾರವಾದ ಸಲ್ಮಾನ್ ರಶ್ದಿ ಬರೆದ Satanic verses ಸಹ ಓದುವ ಯೋಗ ನನಗೆ ಇತ್ತು ಅಂಥ ಇಲ್ಲಿ ಆ ಪುಸ್ತಕ ನೋಡಿದಾಗಲೆ ತಿಳಿದಿದ್ದು. ಒಟ್ಟಿನಲ್ಲಿ ಕನ್ನಡದ ಪುಸ್ತಕದ ಕೊರತೆ ಬಿಟ್ಟರೆ ಮತ್ತೆನೂ ಇಲ್ಲ.

- - - - - - - - - - - - - - - - -

ಇಲ್ಲಿ ಪುಸ್ತಕದ ಅಂಗಡಿಯಲ್ಲಿ ನಿಂತು ಯಾವುದೇ ಪುಸ್ತಕವನ್ನೂ ಓದಬಹುದು. ಯಾರೂ ಏನೂ ಹೇಳುವುದಿಲ್ಲ. ಕೆಲವೊಂದು ಪುಸ್ತಕಾಲಯದಲ್ಲಿ ಈ ರೀತಿ ಪುಸ್ತಕ ಓದಲು ಬೇರೆ ಜಾಗವೇ ಇದೆ !

ಟಿಪ್ಪಣೆ: Tachiyomi suru (立ち読みする)- ಪುಸ್ತಕಾಲಯದಲ್ಲಿ ನಿಂತು ಓದುವುದು.

07 November 2007

ಬಾಳ ಪುಟದಿಂದ

ಮುಚ್ಚಿ ಕೊಟ್ಟಿದ್ದರ ಬಗ್ಗೆ ಬಡಾಯಿ ಕೊಚ್ಚಬಾರದು.

ಕಳೆದು ಹೋದದ್ದು ಹುಡುಕಿದರೆ ಸಿಗಬಹುದು; ದೋಚಿಕೊಂಡು ಹೋದದ್ದು ಎಂದಿಗೂ ಸಿಗಲಾರದು.

ಸಿಕ್ಕಷ್ಟರಲ್ಲಿಯೇ ತೃಪ್ತಿ ಯಾರೂ ಹೊಂದುವುದಿಲ್ಲ;
ಮುಂದಕ್ಕೆ ಹೋಗಿ ದೋಚುವ ಆಶೆಯನ್ನು ( ಯಾರೂ ) ಬಿಡುವುದೂ ಇಲ್ಲ.

( ಸಿಕ್ಕಿದಾಗ ) ನುಂಗಿದವ ಬದುಕಿದ.
ನೋಡಿದವ ಸೊರಗಿದ.

ಸಣ್ಣದಕ್ಕೆ ಆಶೆ ಪಡುವುದು ಮೂರ್ಖತನ.
ದೊಡ್ಡದ್ದು ಸಿಕ್ಕರೆ ಬಿಡುವುದೂ ಮೂರ್ಖತನ.

ಬಹುಮಾನ ಕೊಡುವವರನ್ನು ಅವಲಂಬಿಸಿದೆಯೇ ಹೊರತು ಅರ್ಹತೆಯುಳ್ಳವರನ್ನಲ್ಲ !

27 October 2007

ಹಣ

ಹಣ ಇಲ್ಲದಿರುವಾಗ ಬರುವ ತೊಂದರೆಗಳು .. ಇವುಗಳ ಬಗ್ಗೆ ಆಲೋಚಿಸುತ್ತ ಕಳೆದ ಆ ದಿನಗಳಲ್ಲಿ ಬರೆದ ಟಿಪ್ಪಣೆಗಳಿಂದ ಆಯ್ದ ಕೆಲವು ತುಣುಕುಗಳು

* ಮನುಷ್ಯನಿಗೆ ಹಣದ ಹುಚ್ಚು ಇರಕೂಡದೆಂದು ನಂಬುವವರಲ್ಲಿ ನಾನೂ ಒಬ್ಬ. ಆದರೆ, ಹಣವಿಲ್ಲದಿರುವುದರಿಂದ ಬರುವ ಸಮಸ್ಯೆಗಳು ಬರಕೂಡದೆಂದು ನನ್ನ ಕೋರಿಕೆ.
* ಒಂದು ಸಲ ಹಣ ಬರಲು ಪ್ರಾರಂಭವಾದರೆ ಅದು ಪ್ರವಾಹದಂತೆ, ಅಲೆಗಳಂತೆ ಬರುತ್ತಿರುತ್ತದೆ. ಇಷ್ಟೊಂದು ಹಣ ಈ ಪ್ರಪಂಚದಲ್ಲಿ ಇಷ್ಟು ದಿನ ಎಲ್ಲಿತ್ತು ಎಂದು ನಾವು ಆಶ್ಚರ್ಯ ಪಡುವಂತೆ ಮಾಡುತ್ತದೆ.
* ಊಟವಿಲ್ಲದೆ ದಿನಗಟ್ಟಲೆ ಕಳೆದ ಸ್ಥಿತಿಯಿಂದ ಹಣವಿದ್ದರೆ ಲೆಕ್ಕವೇ ಇರುವುದಿಲ್ಲ ಸ್ಥಿತಿಗೇರಲು, ಮೊದಲಿನಿಂದಲೂ ನನಗಿರುವ ಏಕೈಕ ಅರ್ಹತೆ – “ ಹಣದ ಬಗ್ಗೆ ಆಕಾಂಕ್ಷಾಪೂರಿತವಾದ ಅವಗಾಹನೆ ಮಾತ್ರ”
* ಹಣ ಸಂಪಾದಿಸುವ ಕಲೆಯನ್ನು ಒಂದು ಜವಾಬ್ದಾರಿಯೆಂದೂ, ಅಭ್ಯಾಸವಾಗಿಯೂ ಬದಲಾಯಿಸಬೇಕೆಂದೂ, ಅದಕ್ಕಾಗಿ ಈ ಪ್ರಪಂಚದಲ್ಲಿ ತುಂಬಾ ಅವಕಾಶಗಳಿವೆ ಎಂದೂ, ಹಣ ಸಂಪಾದಿಸುವುದು ಒಂದು ಆನಂದದಾಯಕವಾದ ಪ್ರಕ್ರಿಯೆಯೇ ವಿನಾ ಕಷ್ಟಪಡುವುದೋ, ಬೇರೆಯವರಿಗೆ ಮೋಸ ಮಾಡುವುದೋ ಅಲ್ಲವೆಂದು ನಾವು ಅರಿತುಕೊಳ್ಳಬೇಕು.
* ಹಣ ಇರುವವರು ಬೇರೆ. ಹಣ ಸಂಪಾದಿಸುವವರು ಬೇರೆ.

08 October 2007

ಆತ್ಮಗತ ಮಾತು

ನಿಮ್ಮ ಮನೆಯ ಬಾಗಿಲನ್ನು ಅದೃಷ್ಟ ಬಡಿಯುವುದು. ( ನೆನಪಿರಲಿ : ನೆಂಟರೂ ಕೂಡ ! ).
For the first time ‘Fortune’ knocks. Next time it’s his daughter that knocks the door, ie. ‘Mis-fortune’.
ಅದೃಷ್ಟ ಎನ್ನುವುದು ಒಮ್ಮೆ ಮಾತ್ರ ಬಾಗಿಲು ಬಡಿದರೆ ‘ ದುರಾದೃಷ್ಟ ‘ ನೀವು ಬಾಗಿಲು ತೆಗೆಯುವ ತನಕ ಬಡಿಯುತ್ತಲೇ ಇರುವುದು.

ಪ್ರತಿಫಲ ಬಯಸಿದರೆ ಅದು ಸೇವೆಯಾಗಲಾರದು. ಅದೊಂದು ಕೆಲಸವಾದಿತು.
ಅದಕ್ಕಾಗಿಯೇ ಸಾರ್ವಜನಿಕ ಆಸ್ಪತ್ರೆ , ಸರಕಾರಿ ಕಛೇರಿಯಲ್ಲಿ ‘ ಪ್ರತಿಫಲ ‘ ಕೊಟ್ಟರೆ ಮಾತ್ರ ನಿಮ್ಮ ಕೆಲಸವಾದಿತು ! ಹಾಗೆಯೇ ಸರಕಾರಿ ಕಛೇರಿಯ ಗೋಡೆಯ ಮೇಲೆ ಕಾಣುವ ಬರಹ – “ ಸರಕಾರಿ ಕೆಲಸ , ದೇವರ ಕೆಲಸ “ . ಆ ಸರಕಾರಿ ಕೆಲಸ , ದೇವರಿಗೇ ಪ್ರೀತಿ. ದೇವರೇ ಬಂದು ಆ ಕೆಲಸ ಮಾಡಿ ಕೊಡಬೇಕು.

ದಲಾವಣೆ ನಮ್ಮ ವ್ಯಕ್ತಿತ್ವದಲ್ಲಿ ಆಗಬೇಕು. ವರ್ತನೆಯಲ್ಲಿ ಅಲ್ಲ.

ನಗೆ ತುಂಬಾ ಬೇಸರವಾದಾಗ, ಘಾಸಿಗೊಂಡಾಗ, ನನಗೆ ನಾನೇ ತುಂಬಾ ನಿರುಪಯುಕ್ತ ಅನ್ನಿಸಿದಾಗ ಒಂದು ವಿಷಯ ನೆನಪು ಮಾಡಿಕೊಳ್ಳುವೆ ! ಆವತ್ತು ಕೋಟ್ಯಂತರ ವೀರ್ಯಾಣುಗಳು ಸ್ಪರ್ಧೆಗೆ ಬಿದ್ದಿದ್ದಾಗ ಅವೆಲ್ಲವನ್ನೂ ಹಿಂದಕ್ಕೆ ಹಾಕಿ ಮಾತೃಗರ್ಭಕ್ಕೆ ಸೇರಿ ಮಗುವಿಗೆ ರೂಪು ಪಡೆದಿದ್ದು ಅತ್ಯಂತ ಯಶಸ್ವಿ ವೀರ್ಯಾಣು ನಾನೇ ಆಗಿದ್ದೆ!

ಡಿ ಜಗತ್ತಿನ ಅನುಕಂಪ ಬೇಡುವ ಮನಸ್ಥಿತಿಯನ್ನು ದೂರವಿಟ್ಟರೆ ಮಾತ್ರ ಒಬ್ಬ ಮನುಷ್ಯ, ಏಕಾಂತದಲ್ಲಿ ಗಾಢವಾದ ಜೀವನ ದರ್ಶನ ಹುಟ್ಟುತ್ತದೆ.

ನು ನಡೆಯಿತೆಂದಲ್ಲ ಪ್ರಶ್ನೆ. ಅದನ್ನು ಹೇಗೆ ನೋಡಿದೆವೆಂದು ಉತ್ತರ.

05 October 2007

ನೀಲುಗಳ ಅರಸುತಾ ....0.4

ಚಳಿಯಾದಾಗ ನೀನೆ ಬೇಕು ಅಂತ
ಚಡಪಡಿಸುವ ಜೀವಕ್ಕೆ ಬೆಳಿಗ್ಗೆ ಹೊತ್ತಿನಲ್ಲಿ ಸಾಕ್ಷಿ
ಹೇಳಲು ಬಾರದ ಅಮಾಯಕತೆ !

29 September 2007

ಸಾವು – ಪತ್ರ – ಸಾರಾಂಶ



ಹೀಗೆ ಒಂದು ಸಾವಿನ ಮುಂಚೆ ಬರೆದ ಪತ್ರದ ಸಾರಾಂಶ :

.....ಈ ಬಾಳು ಇಲ್ಲಿಲ್ಲ. ಇವತ್ತಿನ ಬದುಕು ಬದುಕೇ ಅಲ್ಲ. ಇದನ್ನು ತಿರಸ್ಕರಿಸಬೇಕು. ಇಲ್ಲಿಂದ ನಿರ್ಗಮಿಸಬೇಕು. ಇಲ್ಲಿ ಸತ್ತು, ಇಲ್ಲಿ ಕೊಳೆತು, ಇನ್ನೆಲ್ಲೋ ಚಿಗುರಬೇಕು. ನನ್ನ ಅಸ್ತಿತ್ವಕ್ಕೆ ಅರ್ಥವಿಲ್ಲ. ಇದು ಉತ್ತುಂಗ ಪರ್ವತದ ತುದಿಯೂ ಅಲ್ಲ; ನಿರ್ಜನ – ನೀರವ ಪ್ರಪಾತದ ಆಳವೂ ಅಲ್ಲ. ಇದು ನಿರ್ಮಾನುಷ ಬಯಲು.ಈ ಬಯಲಿನಲ್ಲಿ ಏನೂ ಬೆಳೆಯುವುದಿಲ್ಲ. ಏನೂ ಘಟಿಸುವುದಿಲ್ಲ. ಇಲ್ಲಿಗೆ ಯಾರು ಬರುವುದಿಲ್ಲ. ಇಲ್ಲಿಂದ ಹೊರಕ್ಕೆ ಹೋಗಲು ದಾರಿಯೂ ಇಲ್ಲ. ಬಯಲಿನಲ್ಲಿ ನಾನು ಒಂಟಿ ; ಒಬ್ಬಂಟಿ.
ನನ್ನೊಂದಿಗೆ ನಾನೆ ಮಾತಾಡಿಕೊಳ್ಳಬೇಕು. ನಾನೇ ಸಂತೈಸಿಕೊಳ್ಳಬೇಕು. ನನ್ನೊಂದಿಗೆ ನಾನೇ ದುಃಖ ಹೇಳಿಕೊಳ್ಳಬೇಕು,ಇಲ್ಲಿ ಸಾಯುವ ಸವಲತ್ತೂ ಇಲ್ಲ. ಬದುಕುವುದಕ್ಕೆ ಬೇಕಾಗುವ incentive ಕೂಡ ಇಲ್ಲ. ಹೇಗೆ ಬದುಕಿರಲಿ? ಅಥವಾ ಹೇಗೆ ಸಾಯಲಿ ? ನನ್ನಿಂದ ಯಾರನ್ನೂ ಪ್ರೀತಿಸಲೂ ಸಾಧ್ಯವಾಗುತ್ತಿಲ್ಲ. ಮತ್ತು ನನ್ನನ್ನು ಯಾರೂ ಪ್ರೀತಿಸುತ್ತಿಲ್ಲ. ( ನಾನು ನಿರೀಕ್ಷಿಸಿದಂತೆ ಅನ್ನಲೇ ? ( ಈಗಲೂ ಬಿಡದ ನನ್ನ ಕುಹುಕತನ ! ))

.
.
.

I am Destitute. ನಾನು ಅನಾಥ. ಅನಾಥರನ್ನು ದೇವರು ಮಾತ್ರ ರಕ್ಷಿಸುತ್ತಾನಂತೆ. ನನ್ನ ಪಾಲಿಗೆ ದೇವರೇ ಇಲ್ಲ. ಅವನನ್ನೇ ನಂಬದವನಿಗೆ , ಅವನು ಕೊಡುವ ರಕ್ಷಣೆಯಲ್ಲಿ ಅದೆಂಥ ನಂಬಿಕೆಯಿದ್ದೀತು ?
.
.
.
……………… ನಾನು ಕಾಲವನ್ನು ಕಂಡ ಕಂಡಲ್ಲಿ ಕೊಂದುಬಿಟ್ಟೆ . ಈಗ ನಾನು ಕಾಲನ ಕೃಪೆಯಲ್ಲಿ ಇದ್ದೆನೆ. ನನ್ನನ್ನು ಹೂಳಲು ಕಾಲ ತಯಾರಾಗಿ ನಿಂತಿದೆ ! ….ಇದುವೇ ಜೀವನ.

22 September 2007

ವಿಡಂಬನೆ




ಜಪಾನಿನ ರೈಲು ಪ್ರಯಾಣದಲ್ಲಿ ಖಾಯಂ ನೋಡುವ ದೃಶ್ಯದಲ್ಲಿ ಇದೂ ಒಂದು. ಜನರಿಂದ ತುಂಬಿದ ರೈಲಿನಲ್ಲೂ ಗದ್ದಲ ಇಲ್ಲವೇ ಇಲ್ಲ. ಮೊಬೈಲ ಕಿಂಕಿಣಿಯೂ ಇಲ್ಲ. ಜನರ ಮಾತೂ – ಪಿಸುಮಾತಿನಲ್ಲೆ. ಇಂತಹ ವಾತಾವರಣದಲ್ಲಿ ನಿದ್ದೆ ಬರದೆ ಇನ್ನೇನು ಮಾಡಲು ಸಾಧ್ಯ ?…ಈ ಚಿತ್ರ ಬಹಳ ಮುಗ್ಧವಾಗಿ ಕಾಣುವುದು ಅಲ್ವಾ ..

ಆದರೆ ….

ಅತಿಯಾದ ದುಡಿತದಿಂದಾಗಿ ಒಬ್ಬ ಸಹಪ್ರಯಾಣಿಕ ಕುಳಿತಲ್ಲಿನಿಂದಲೇ ಗೊಟಕ್ ಅಂದಿದ್ದಾನೆ.. ಮನೆಯ ತಲುಪುವ ಬದಲು ಪರಂಧಾಮವ ತಲುಪಿದ್ದಾನೆ.ಇಲ್ಲಿನ ೧೪ ತಾಸಿನ ಕೆಲಸವ ಬಿಟ್ಟು ಪರಲೋಕದ ಮೆಗಾ ಕಛೇರಿಯಲ್ಲಿ ಸಾಮಾನ್ಯವಾಗಿ ೨೦ ತಾಸಿನ ದುಡಿಮೆಗೆ ಹೊಂದಿಕೊಳ್ಳಬೇಕು ಆತ. ರೈಲಿನ ತೂಕಡಿಕೆ ನಿದ್ದೆಯಲ್ಲಿ ತಿಳಿಯದೆ ಆತ ಖಾಯಂ ನಿದ್ದೆಗೆ ಜಾರಿದ್ದು ನಿಜಕ್ಕೂ ವಿಷಾದನೀಯ.
ಈ ಆರು ಮಹಾನುಭಾವರಲ್ಲಿ ಯಾರು ಕುಳಿತಲ್ಲಿಯೇ ಕೊಳೆಯುತ್ತಿದ್ದಾರೆ ಅಂಥ ಹೇಳ್ತಿರಾ ?

14 September 2007

ನೀಲುಗಳ ಅರಸುತಾ ....0.3





ನೀನು ಇಲ್ಲಿದರೆಷ್ಟು ಚೆನ್ನ !
ನನ್ನ ಏಕತಾನತೆಯ ಕೊರೆತ ಕೇಳಲು
ಸುಂದರ ಪೂರ್ಣಚಂದ್ರನ ನೋಡಲು
_____________________________

ತಾರೆಗಳ ಮಧ್ಯದೀ
ಬೆಳಗುವ ಪೂರ್ಣಿಮೆ ಚಂದ್ರನೇ
ನಿನ್ನ ಸೌಂದರ್ಯವೂ ಕ್ಷಣಿಕವೇ,
ದಿನ ನಿತ್ಯದ ಏರಿಳಿತದಿ ಸಾವು ಸನ್ನಿಹಿತ

13 September 2007

ನೀಲುಗಳ ಅರಸುತಾ ....0.2




ಭಗವಂತನ ಅಪಾರ ಆಸ್ತಿ ಲಕ್ಷ-ಕೋಟಿ ಇಹುದು,
ಇಬ್ಬನಿ - ನಡುಗುತಿರುವ ಹುಲ್ಲಿನ ಮೇಲೆ
ವಜ್ರದಂದದಿ ಹೊಳೆಯುತಿರಲು


____________________________________












ಡುತಾ, ಓಡುತಾ ಅರಮನೆ ಸೇರಿದರೂ
ಒಬ್ಬಂಟಿಯಾಗಿದ್ದಾಗ ಆವರಿಸಿಕೊಂಡಿದ್ದು -
ಮುಳ್ಳಿನಂತೆ ನಾಟುವ ಪ್ರೀತಿಯ ಗುಡಿಸಲ ನೆನಪು
____________________________________


ಬೆಟ್ಟವ ಹತ್ತಲು ಪ್ರಯತ್ನ ನಿಧಾನವಾಗಿ,
ಅತಿ ನಿಧಾನವಾಗಿ
ಆ ಬಸವನ ಹುಳುವಿನಿಂದ,
ನನ್ನಲ್ಲಿ ಆವರಿಸಿರುವ 'ಕುಂಟುತನ'
ಅರಿವಾಗಿದ್ದು ಆ ಕ್ಷಣದಲ್ಲಿ

____________________________________















ಕಿವಿಬಳಿ ಕುಯ್ಞಿಗುಡುತ್ತಿರುವ ಸೊಳ್ಳೆ
ನನ್ನ ಕೈ ಹೊಡೆತದಿ ಸಾವಿಗೆ ಶರಣು
ಸಾವಿಗೆ ಸ್ವಾತಂತ್ರ್ಯ , ನನಗೆ ಸಿಕ್ಕಿದೆ ಪುನರ್ಜನ್ಮ

07 September 2007

ನೀಲುಗಳ ಅರಸುತಾ ...0.1



____________________________

ತಾಜ್ ಮಹಲನ ಸುಂದರ ಗೋಡೆಯ ಮಧ್ಯೆ
ಆ ರೋಧನ , ರಕ್ತ , ಬೆವರು , ಶೋಷಣೆ
ಎಲ್ಲವೂ ಲುಪ್ತ ಸಮಾಧಿ ಹಾಗೂ ನೀರವ ಮೌನ


____________________________

ಮತ್ತೆ ವಸಂತ ಆರಂಭ :
ಹಳೆಯ ಮೂರ್ಖತ್ವದ ಪುನರ್ ಆವರ್ತನ
ಹೊಸ ತಪ್ಪುಗಳ ಆವಿಷ್ಕಾರ
____________________________

ದೂರದ ಹೊಲದಲ್ಲಿ ಬಿಸಿಲಲಿ
ರೈತನ ಕೆಲಸ ನಡೆಯುತಿದೆ
ಮಾವಿನ ಮರದ ನೆರಳಿನ ಛಾವಣಿಯಡಿ
ಬೆವರು, ಮಣ್ಣಿನ ಸಮ್ಮಿಳನ ಸುಖದ ನಿಟ್ಟುಸಿರಡಿಯಲಿ
____________________________

ದೂರದ ಬೆಟ್ಟದ ಸುಂದರ
ಪ್ರತಿಬಿಂಬ ರೆಕ್ಕೆ ಮುರಿದ
ಆ ದುಂಬಿಯ ಕಣ್ಣುಗಳಲ್ಲಿ

06 September 2007

ಮರೆತ ಹಾದಿಯಲಿ - ಹಿನ್ನೋಟ

ಕವನಗಳು , ಪನ್ನುಗಳನ್ನು ಬರೆಯುವದರಲ್ಲಿ ಇರುವ ಸುಖ ಮತ್ತೆ , ಮತ್ತೆ
ನನ್ನನ್ನು ಹಿಡಿದೆಳೆದು ಬರೆಯುವ ಹಾದಿಯಲ್ಲಿ ತಂದು ನಿಲ್ಲಿಸಿದಾಗ ಸಿಕ್ಕ ಕೆಲವು ಕಾಯಿಗಳು -

1.
ಕಾಲೇಜಾಯಣ


ವಿಚಿತ್ರ ಲೋಕವೇ ಸರಿ , ಕಾಲೇಜು
ಅಲ್ಲಿ ಎಲ್ಲರಿಗೂ ಒಂದೊಂದು ಕ್ರೇಜು
ಇಲ್ಲಿ ಓದಲು ಬರುವವರು ಕಮ್ಮಿ
ಅರೇ ! ಷೋಡಶಿಯರು ಆಗ್ವರು ಮಮ್ಮಿ

2.
ಜೋಡಿ

ನನ್ನ , ಅವಳ ಪರಿಪೂರ್ಣ ಜೋಡಿ
ಮದುವೆಗೆ ಮೊದಲು - ಪ್ರೇಮದ ಕೋಡಿ
ಜನಿಸಲು ನಾಲಕ್ಕು ಜೀವದ ಕುಡಿ
ಈಗ ಬರಿ ಸಾಲದ ಹೊರೆಯೇ ಬಿಡಿ

3.
ತೀರ್ಪನು ನೀಡಿತು
ನ್ಯಾಯಾಧೀಶರ Mouth
'ಕೊಲೆಗಾರನಿಗೆ ತಕ್ಕ ಸಜಾ " मौत "

4.
ಕ್ಯಾತ ಓದಿದ್ದು
ಕರಿಕೋಟಿನವರ
" Law "
ಪ್ರತಿ ಕೇಸಿನಲ್ಲಿ
ಗೆದ್ದಾಗಲೂ
ಇವಗೆ " ಧನ -Lawಭ "

05 September 2007

ಶ್ವಾನ ಪುರಾಣ

ತಮ್ಮ ಜೊತೆ ತಮ್ಮ ಸಾಕು ನಾಯಿಗೂ ವಾಕಿಂಗ್ ಮಾಡಿಸುವ ಅಭ್ಯಾಸ ನಗರ ಪ್ರದೇಶದಲ್ಲಿ ಈಗ Fashion ಆಗಿದೆ.ಇದು ನಾಯಿಯ ಆರೋಗ್ಯದ ಬಗ್ಗೆ ಕಾಳಜಿ ಎಂದರೆ ತಪ್ಪು. ನಾಯಿ ಮುಂಡೆದು ತಮ್ಮ ಮನೆಯ ಮುಂದೆ ಗಲೀಜು ಮಾಡದೆ ಮತ್ಯಾರ ಮನೆ ಮುಂದೆಯೋ ರಸ್ತೆಯ ನಡುಮಧ್ಯೆಯೋ ಮಾಡಲಿ ಎಂಬ ಕುತಿತ್ಸ ಯೋಜನೆ.

ನಾನು ಟೊಕಿಯೋದಲ್ಲಿ ಅನೇಕ ನಾಯಿ ಪಾಲಕರನ್ನು ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವುದನ್ನು ನೋಡಿದ್ದೇನೆ. ಎಲ್ಲರೂ ಜೊತೆಗೆ ಒಂದು ಪ್ಲಾಸ್ಟಿಕ್ ಬ್ಯಾಗನ್ನು ಜೊತೆಗೆ ಯಾಕೆ ತೆಗೆದುಕೊಂಡು ಹೋಗುತ್ತಾರೆಂದು ಬಹಳ ದಿನದ ತನಕ ನೋಡುತ್ತಿದ್ದರೆ ಒಂದು ದಿನ ತಿಳಿಯಿತು. ಆ ನಾಯಿಯ ಗಲೀಜನ್ನು ಪ್ಲಾಸ್ಟಿಕ್ ನಲ್ಲಿ ತುಂಬಿಕೊಳ್ಳುತ್ತಿರುವಾಗ ನಾನು ನಾಯಿ ಯಜಮಾನನನ್ನು ನೋಡಿದೆ. ಆ ಹಾದಿಯಲ್ಲಿ ನನ್ನ ಬಿಟ್ಟರೆ ಮತ್ಯಾರೂ ಇರದಿದ್ದರೂ ಆತ ಆ ಕೆಲಸ ಖಡಾಕಂಡಿತ ಮಾಡುತ್ತಿದ್ದ ಎನ್ನುವುಧು ಗ್ಯಾರಂಟಿ. ಈ ರೀತಿಯ ನಾಗರಿಕ ಪ್ರಜ್ಞೆ ನಿಜಕ್ಕೂ ನಮ್ಮಲ್ಲಿಯೂ ಇದ್ದರೇ ಎನ್ನುವ ಆಲೋಚನೆ ಒಮ್ಮೆ ಮನದೆದುರು ಹಾದಿ ಹೋಗಿದ್ದಂತೂ ನಿಜ.

ಇಂದು ಯೋಯೋಗಿಯಲ್ಲಿರುವ ನಮ್ಮ ಆಫೀಸಿಗೆ ಕಂಪನಿಯ ಮೇಲಧಿಕಾರಿಗಳು ಬಂದಿದ್ದಾರೆಂದು ಹೊರಟಿದ್ದೆ. Ebisu ಎನ್ನುವ ಸ್ಟೇಷನನಲ್ಲಿ ಒಬ್ಬ ಸ್ವಯಂಚಾಲಿತ ಟಿಕೇಟ್ ಕೌಂಟರ ಬಳಿ ಲಾಬ್ರಡಾರ ಜಾತಿಯ ನಾಯಿ ಹಿಡಿದು ನಿಂತಿದ್ದ. ಮಾನವ ಸಹಜ ಕುತೂಹಲದೊಂದಿಗೆ ನೋಡಿದರೆ ಆತ ಕುರುಡ. ಆ ನಾಯಿ ಪೂರ್ತಿ ತರಬೇತಿ ಪಡೆದ ನಾಯಿಯ ತರಹ ಕಂಡಿತು. ಕಾರಣ ಆ ನಾಯಿ ಅಷ್ಟು ಜನ ದಟ್ಟನೆಯಲ್ಲಿಯೂ ವೀಚಲಿತವಾಗದೆ ಆರಾಮವಾಗಿ ಒಡೆಯನ ಕಣ್ಣಾಗಿ ನಿಂತಿತ್ತು. ಕಾಕತಾಳಿಯ ಎನ್ನುವಂತೆ ತಿರುಗಿ ಆಫೀಸಿನಿಂದ ಬರುವಾಗ ( ಸುಮಾರು ೧.೩೦ ತಾಸಿನ ನಂತರ ) ಯೋಯೋಗಿ ಸ್ಟೇಷನ್ನನಲ್ಲಿ ಅದೆ ಮಹಾನುಭಾವನನ್ನು ಕಂಡೆ. ಈ ಬಾರಿ ಇನ್ನೊಂದು ವಿಚಿತ್ರ ಕಣ್ಣಿಗೆ ಬಿತ್ತು. ಅಲ್ಲಿ ಇದ್ದ ೪ ಸ್ವಯಂಚಾಲಿತ ಟಿಕೇಟ್ ಕೌಂಟರನಲ್ಲಿ ೧ ಮಾತ್ರ ಖಾಲಿ ಇತ್ತು. ಆ ನಾಯಿ ಆ ಖಾಲಿ ಇರುವ ಕೌಂಟರ ಬಳಿ ಅವನನ್ನು ಕರೆದೊಯ್ದು ನಿಲ್ಲಿಸಿದಾಗ ನಿಜಕ್ಕೂ ಆತ ಎಷ್ಟು ಸ್ವತಂತ್ರವಾಗಿ ಯಾರ ಮೇಲೂ ಹೊರೆಯಾಗದೆ ಬದುಕುತ್ತಿದ್ದಾನೆ ಅನ್ನಿಸ್ತು. ಆ ನಾಯಿಗೂ ಈ ನಾಯಿ ಪ್ರಿಯನ ನಮಸ್ಕಾರ !