ಶ್ವಾನ ಪುರಾಣ
ತಮ್ಮ ಜೊತೆ ತಮ್ಮ ಸಾಕು ನಾಯಿಗೂ ವಾಕಿಂಗ್ ಮಾಡಿಸುವ ಅಭ್ಯಾಸ ನಗರ ಪ್ರದೇಶದಲ್ಲಿ ಈಗ Fashion ಆಗಿದೆ.ಇದು ನಾಯಿಯ ಆರೋಗ್ಯದ ಬಗ್ಗೆ ಕಾಳಜಿ ಎಂದರೆ ತಪ್ಪು. ನಾಯಿ ಮುಂಡೆದು ತಮ್ಮ ಮನೆಯ ಮುಂದೆ ಗಲೀಜು ಮಾಡದೆ ಮತ್ಯಾರ ಮನೆ ಮುಂದೆಯೋ ರಸ್ತೆಯ ನಡುಮಧ್ಯೆಯೋ ಮಾಡಲಿ ಎಂಬ ಕುತಿತ್ಸ ಯೋಜನೆ.
ನಾನು ಟೊಕಿಯೋದಲ್ಲಿ ಅನೇಕ ನಾಯಿ ಪಾಲಕರನ್ನು ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವುದನ್ನು ನೋಡಿದ್ದೇನೆ. ಎಲ್ಲರೂ ಜೊತೆಗೆ ಒಂದು ಪ್ಲಾಸ್ಟಿಕ್ ಬ್ಯಾಗನ್ನು ಜೊತೆಗೆ ಯಾಕೆ ತೆಗೆದುಕೊಂಡು ಹೋಗುತ್ತಾರೆಂದು ಬಹಳ ದಿನದ ತನಕ ನೋಡುತ್ತಿದ್ದರೆ ಒಂದು ದಿನ ತಿಳಿಯಿತು. ಆ ನಾಯಿಯ ಗಲೀಜನ್ನು ಪ್ಲಾಸ್ಟಿಕ್ ನಲ್ಲಿ ತುಂಬಿಕೊಳ್ಳುತ್ತಿರುವಾಗ ನಾನು ನಾಯಿ ಯಜಮಾನನನ್ನು ನೋಡಿದೆ. ಆ ಹಾದಿಯಲ್ಲಿ ನನ್ನ ಬಿಟ್ಟರೆ ಮತ್ಯಾರೂ ಇರದಿದ್ದರೂ ಆತ ಆ ಕೆಲಸ ಖಡಾಕಂಡಿತ ಮಾಡುತ್ತಿದ್ದ ಎನ್ನುವುಧು ಗ್ಯಾರಂಟಿ. ಈ ರೀತಿಯ ನಾಗರಿಕ ಪ್ರಜ್ಞೆ ನಿಜಕ್ಕೂ ನಮ್ಮಲ್ಲಿಯೂ ಇದ್ದರೇ ಎನ್ನುವ ಆಲೋಚನೆ ಒಮ್ಮೆ ಮನದೆದುರು ಹಾದಿ ಹೋಗಿದ್ದಂತೂ ನಿಜ.
ಇಂದು ಯೋಯೋಗಿಯಲ್ಲಿರುವ ನಮ್ಮ ಆಫೀಸಿಗೆ ಕಂಪನಿಯ ಮೇಲಧಿಕಾರಿಗಳು ಬಂದಿದ್ದಾರೆಂದು ಹೊರಟಿದ್ದೆ. Ebisu ಎನ್ನುವ ಸ್ಟೇಷನನಲ್ಲಿ ಒಬ್ಬ ಸ್ವಯಂಚಾಲಿತ ಟಿಕೇಟ್ ಕೌಂಟರ ಬಳಿ ಲಾಬ್ರಡಾರ ಜಾತಿಯ ನಾಯಿ ಹಿಡಿದು ನಿಂತಿದ್ದ. ಮಾನವ ಸಹಜ ಕುತೂಹಲದೊಂದಿಗೆ ನೋಡಿದರೆ ಆತ ಕುರುಡ. ಆ ನಾಯಿ ಪೂರ್ತಿ ತರಬೇತಿ ಪಡೆದ ನಾಯಿಯ ತರಹ ಕಂಡಿತು. ಕಾರಣ ಆ ನಾಯಿ ಅಷ್ಟು ಜನ ದಟ್ಟನೆಯಲ್ಲಿಯೂ ವೀಚಲಿತವಾಗದೆ ಆರಾಮವಾಗಿ ಒಡೆಯನ ಕಣ್ಣಾಗಿ ನಿಂತಿತ್ತು. ಕಾಕತಾಳಿಯ ಎನ್ನುವಂತೆ ತಿರುಗಿ ಆಫೀಸಿನಿಂದ ಬರುವಾಗ ( ಸುಮಾರು ೧.೩೦ ತಾಸಿನ ನಂತರ ) ಯೋಯೋಗಿ ಸ್ಟೇಷನ್ನನಲ್ಲಿ ಅದೆ ಮಹಾನುಭಾವನನ್ನು ಕಂಡೆ. ಈ ಬಾರಿ ಇನ್ನೊಂದು ವಿಚಿತ್ರ ಕಣ್ಣಿಗೆ ಬಿತ್ತು. ಅಲ್ಲಿ ಇದ್ದ ೪ ಸ್ವಯಂಚಾಲಿತ ಟಿಕೇಟ್ ಕೌಂಟರನಲ್ಲಿ ೧ ಮಾತ್ರ ಖಾಲಿ ಇತ್ತು. ಆ ನಾಯಿ ಆ ಖಾಲಿ ಇರುವ ಕೌಂಟರ ಬಳಿ ಅವನನ್ನು ಕರೆದೊಯ್ದು ನಿಲ್ಲಿಸಿದಾಗ ನಿಜಕ್ಕೂ ಆತ ಎಷ್ಟು ಸ್ವತಂತ್ರವಾಗಿ ಯಾರ ಮೇಲೂ ಹೊರೆಯಾಗದೆ ಬದುಕುತ್ತಿದ್ದಾನೆ ಅನ್ನಿಸ್ತು. ಆ ನಾಯಿಗೂ ಈ ನಾಯಿ ಪ್ರಿಯನ ನಮಸ್ಕಾರ !
No comments:
Post a Comment