29 September 2007

ಸಾವು – ಪತ್ರ – ಸಾರಾಂಶ



ಹೀಗೆ ಒಂದು ಸಾವಿನ ಮುಂಚೆ ಬರೆದ ಪತ್ರದ ಸಾರಾಂಶ :

.....ಈ ಬಾಳು ಇಲ್ಲಿಲ್ಲ. ಇವತ್ತಿನ ಬದುಕು ಬದುಕೇ ಅಲ್ಲ. ಇದನ್ನು ತಿರಸ್ಕರಿಸಬೇಕು. ಇಲ್ಲಿಂದ ನಿರ್ಗಮಿಸಬೇಕು. ಇಲ್ಲಿ ಸತ್ತು, ಇಲ್ಲಿ ಕೊಳೆತು, ಇನ್ನೆಲ್ಲೋ ಚಿಗುರಬೇಕು. ನನ್ನ ಅಸ್ತಿತ್ವಕ್ಕೆ ಅರ್ಥವಿಲ್ಲ. ಇದು ಉತ್ತುಂಗ ಪರ್ವತದ ತುದಿಯೂ ಅಲ್ಲ; ನಿರ್ಜನ – ನೀರವ ಪ್ರಪಾತದ ಆಳವೂ ಅಲ್ಲ. ಇದು ನಿರ್ಮಾನುಷ ಬಯಲು.ಈ ಬಯಲಿನಲ್ಲಿ ಏನೂ ಬೆಳೆಯುವುದಿಲ್ಲ. ಏನೂ ಘಟಿಸುವುದಿಲ್ಲ. ಇಲ್ಲಿಗೆ ಯಾರು ಬರುವುದಿಲ್ಲ. ಇಲ್ಲಿಂದ ಹೊರಕ್ಕೆ ಹೋಗಲು ದಾರಿಯೂ ಇಲ್ಲ. ಬಯಲಿನಲ್ಲಿ ನಾನು ಒಂಟಿ ; ಒಬ್ಬಂಟಿ.
ನನ್ನೊಂದಿಗೆ ನಾನೆ ಮಾತಾಡಿಕೊಳ್ಳಬೇಕು. ನಾನೇ ಸಂತೈಸಿಕೊಳ್ಳಬೇಕು. ನನ್ನೊಂದಿಗೆ ನಾನೇ ದುಃಖ ಹೇಳಿಕೊಳ್ಳಬೇಕು,ಇಲ್ಲಿ ಸಾಯುವ ಸವಲತ್ತೂ ಇಲ್ಲ. ಬದುಕುವುದಕ್ಕೆ ಬೇಕಾಗುವ incentive ಕೂಡ ಇಲ್ಲ. ಹೇಗೆ ಬದುಕಿರಲಿ? ಅಥವಾ ಹೇಗೆ ಸಾಯಲಿ ? ನನ್ನಿಂದ ಯಾರನ್ನೂ ಪ್ರೀತಿಸಲೂ ಸಾಧ್ಯವಾಗುತ್ತಿಲ್ಲ. ಮತ್ತು ನನ್ನನ್ನು ಯಾರೂ ಪ್ರೀತಿಸುತ್ತಿಲ್ಲ. ( ನಾನು ನಿರೀಕ್ಷಿಸಿದಂತೆ ಅನ್ನಲೇ ? ( ಈಗಲೂ ಬಿಡದ ನನ್ನ ಕುಹುಕತನ ! ))

.
.
.

I am Destitute. ನಾನು ಅನಾಥ. ಅನಾಥರನ್ನು ದೇವರು ಮಾತ್ರ ರಕ್ಷಿಸುತ್ತಾನಂತೆ. ನನ್ನ ಪಾಲಿಗೆ ದೇವರೇ ಇಲ್ಲ. ಅವನನ್ನೇ ನಂಬದವನಿಗೆ , ಅವನು ಕೊಡುವ ರಕ್ಷಣೆಯಲ್ಲಿ ಅದೆಂಥ ನಂಬಿಕೆಯಿದ್ದೀತು ?
.
.
.
……………… ನಾನು ಕಾಲವನ್ನು ಕಂಡ ಕಂಡಲ್ಲಿ ಕೊಂದುಬಿಟ್ಟೆ . ಈಗ ನಾನು ಕಾಲನ ಕೃಪೆಯಲ್ಲಿ ಇದ್ದೆನೆ. ನನ್ನನ್ನು ಹೂಳಲು ಕಾಲ ತಯಾರಾಗಿ ನಿಂತಿದೆ ! ….ಇದುವೇ ಜೀವನ.

22 September 2007

ವಿಡಂಬನೆ




ಜಪಾನಿನ ರೈಲು ಪ್ರಯಾಣದಲ್ಲಿ ಖಾಯಂ ನೋಡುವ ದೃಶ್ಯದಲ್ಲಿ ಇದೂ ಒಂದು. ಜನರಿಂದ ತುಂಬಿದ ರೈಲಿನಲ್ಲೂ ಗದ್ದಲ ಇಲ್ಲವೇ ಇಲ್ಲ. ಮೊಬೈಲ ಕಿಂಕಿಣಿಯೂ ಇಲ್ಲ. ಜನರ ಮಾತೂ – ಪಿಸುಮಾತಿನಲ್ಲೆ. ಇಂತಹ ವಾತಾವರಣದಲ್ಲಿ ನಿದ್ದೆ ಬರದೆ ಇನ್ನೇನು ಮಾಡಲು ಸಾಧ್ಯ ?…ಈ ಚಿತ್ರ ಬಹಳ ಮುಗ್ಧವಾಗಿ ಕಾಣುವುದು ಅಲ್ವಾ ..

ಆದರೆ ….

ಅತಿಯಾದ ದುಡಿತದಿಂದಾಗಿ ಒಬ್ಬ ಸಹಪ್ರಯಾಣಿಕ ಕುಳಿತಲ್ಲಿನಿಂದಲೇ ಗೊಟಕ್ ಅಂದಿದ್ದಾನೆ.. ಮನೆಯ ತಲುಪುವ ಬದಲು ಪರಂಧಾಮವ ತಲುಪಿದ್ದಾನೆ.ಇಲ್ಲಿನ ೧೪ ತಾಸಿನ ಕೆಲಸವ ಬಿಟ್ಟು ಪರಲೋಕದ ಮೆಗಾ ಕಛೇರಿಯಲ್ಲಿ ಸಾಮಾನ್ಯವಾಗಿ ೨೦ ತಾಸಿನ ದುಡಿಮೆಗೆ ಹೊಂದಿಕೊಳ್ಳಬೇಕು ಆತ. ರೈಲಿನ ತೂಕಡಿಕೆ ನಿದ್ದೆಯಲ್ಲಿ ತಿಳಿಯದೆ ಆತ ಖಾಯಂ ನಿದ್ದೆಗೆ ಜಾರಿದ್ದು ನಿಜಕ್ಕೂ ವಿಷಾದನೀಯ.
ಈ ಆರು ಮಹಾನುಭಾವರಲ್ಲಿ ಯಾರು ಕುಳಿತಲ್ಲಿಯೇ ಕೊಳೆಯುತ್ತಿದ್ದಾರೆ ಅಂಥ ಹೇಳ್ತಿರಾ ?

14 September 2007

ನೀಲುಗಳ ಅರಸುತಾ ....0.3





ನೀನು ಇಲ್ಲಿದರೆಷ್ಟು ಚೆನ್ನ !
ನನ್ನ ಏಕತಾನತೆಯ ಕೊರೆತ ಕೇಳಲು
ಸುಂದರ ಪೂರ್ಣಚಂದ್ರನ ನೋಡಲು
_____________________________

ತಾರೆಗಳ ಮಧ್ಯದೀ
ಬೆಳಗುವ ಪೂರ್ಣಿಮೆ ಚಂದ್ರನೇ
ನಿನ್ನ ಸೌಂದರ್ಯವೂ ಕ್ಷಣಿಕವೇ,
ದಿನ ನಿತ್ಯದ ಏರಿಳಿತದಿ ಸಾವು ಸನ್ನಿಹಿತ

13 September 2007

ನೀಲುಗಳ ಅರಸುತಾ ....0.2




ಭಗವಂತನ ಅಪಾರ ಆಸ್ತಿ ಲಕ್ಷ-ಕೋಟಿ ಇಹುದು,
ಇಬ್ಬನಿ - ನಡುಗುತಿರುವ ಹುಲ್ಲಿನ ಮೇಲೆ
ವಜ್ರದಂದದಿ ಹೊಳೆಯುತಿರಲು


____________________________________












ಡುತಾ, ಓಡುತಾ ಅರಮನೆ ಸೇರಿದರೂ
ಒಬ್ಬಂಟಿಯಾಗಿದ್ದಾಗ ಆವರಿಸಿಕೊಂಡಿದ್ದು -
ಮುಳ್ಳಿನಂತೆ ನಾಟುವ ಪ್ರೀತಿಯ ಗುಡಿಸಲ ನೆನಪು
____________________________________


ಬೆಟ್ಟವ ಹತ್ತಲು ಪ್ರಯತ್ನ ನಿಧಾನವಾಗಿ,
ಅತಿ ನಿಧಾನವಾಗಿ
ಆ ಬಸವನ ಹುಳುವಿನಿಂದ,
ನನ್ನಲ್ಲಿ ಆವರಿಸಿರುವ 'ಕುಂಟುತನ'
ಅರಿವಾಗಿದ್ದು ಆ ಕ್ಷಣದಲ್ಲಿ

____________________________________















ಕಿವಿಬಳಿ ಕುಯ್ಞಿಗುಡುತ್ತಿರುವ ಸೊಳ್ಳೆ
ನನ್ನ ಕೈ ಹೊಡೆತದಿ ಸಾವಿಗೆ ಶರಣು
ಸಾವಿಗೆ ಸ್ವಾತಂತ್ರ್ಯ , ನನಗೆ ಸಿಕ್ಕಿದೆ ಪುನರ್ಜನ್ಮ

07 September 2007

ನೀಲುಗಳ ಅರಸುತಾ ...0.1



____________________________

ತಾಜ್ ಮಹಲನ ಸುಂದರ ಗೋಡೆಯ ಮಧ್ಯೆ
ಆ ರೋಧನ , ರಕ್ತ , ಬೆವರು , ಶೋಷಣೆ
ಎಲ್ಲವೂ ಲುಪ್ತ ಸಮಾಧಿ ಹಾಗೂ ನೀರವ ಮೌನ


____________________________

ಮತ್ತೆ ವಸಂತ ಆರಂಭ :
ಹಳೆಯ ಮೂರ್ಖತ್ವದ ಪುನರ್ ಆವರ್ತನ
ಹೊಸ ತಪ್ಪುಗಳ ಆವಿಷ್ಕಾರ
____________________________

ದೂರದ ಹೊಲದಲ್ಲಿ ಬಿಸಿಲಲಿ
ರೈತನ ಕೆಲಸ ನಡೆಯುತಿದೆ
ಮಾವಿನ ಮರದ ನೆರಳಿನ ಛಾವಣಿಯಡಿ
ಬೆವರು, ಮಣ್ಣಿನ ಸಮ್ಮಿಳನ ಸುಖದ ನಿಟ್ಟುಸಿರಡಿಯಲಿ
____________________________

ದೂರದ ಬೆಟ್ಟದ ಸುಂದರ
ಪ್ರತಿಬಿಂಬ ರೆಕ್ಕೆ ಮುರಿದ
ಆ ದುಂಬಿಯ ಕಣ್ಣುಗಳಲ್ಲಿ

06 September 2007

ಮರೆತ ಹಾದಿಯಲಿ - ಹಿನ್ನೋಟ

ಕವನಗಳು , ಪನ್ನುಗಳನ್ನು ಬರೆಯುವದರಲ್ಲಿ ಇರುವ ಸುಖ ಮತ್ತೆ , ಮತ್ತೆ
ನನ್ನನ್ನು ಹಿಡಿದೆಳೆದು ಬರೆಯುವ ಹಾದಿಯಲ್ಲಿ ತಂದು ನಿಲ್ಲಿಸಿದಾಗ ಸಿಕ್ಕ ಕೆಲವು ಕಾಯಿಗಳು -

1.
ಕಾಲೇಜಾಯಣ


ವಿಚಿತ್ರ ಲೋಕವೇ ಸರಿ , ಕಾಲೇಜು
ಅಲ್ಲಿ ಎಲ್ಲರಿಗೂ ಒಂದೊಂದು ಕ್ರೇಜು
ಇಲ್ಲಿ ಓದಲು ಬರುವವರು ಕಮ್ಮಿ
ಅರೇ ! ಷೋಡಶಿಯರು ಆಗ್ವರು ಮಮ್ಮಿ

2.
ಜೋಡಿ

ನನ್ನ , ಅವಳ ಪರಿಪೂರ್ಣ ಜೋಡಿ
ಮದುವೆಗೆ ಮೊದಲು - ಪ್ರೇಮದ ಕೋಡಿ
ಜನಿಸಲು ನಾಲಕ್ಕು ಜೀವದ ಕುಡಿ
ಈಗ ಬರಿ ಸಾಲದ ಹೊರೆಯೇ ಬಿಡಿ

3.
ತೀರ್ಪನು ನೀಡಿತು
ನ್ಯಾಯಾಧೀಶರ Mouth
'ಕೊಲೆಗಾರನಿಗೆ ತಕ್ಕ ಸಜಾ " मौत "

4.
ಕ್ಯಾತ ಓದಿದ್ದು
ಕರಿಕೋಟಿನವರ
" Law "
ಪ್ರತಿ ಕೇಸಿನಲ್ಲಿ
ಗೆದ್ದಾಗಲೂ
ಇವಗೆ " ಧನ -Lawಭ "

05 September 2007

ಶ್ವಾನ ಪುರಾಣ

ತಮ್ಮ ಜೊತೆ ತಮ್ಮ ಸಾಕು ನಾಯಿಗೂ ವಾಕಿಂಗ್ ಮಾಡಿಸುವ ಅಭ್ಯಾಸ ನಗರ ಪ್ರದೇಶದಲ್ಲಿ ಈಗ Fashion ಆಗಿದೆ.ಇದು ನಾಯಿಯ ಆರೋಗ್ಯದ ಬಗ್ಗೆ ಕಾಳಜಿ ಎಂದರೆ ತಪ್ಪು. ನಾಯಿ ಮುಂಡೆದು ತಮ್ಮ ಮನೆಯ ಮುಂದೆ ಗಲೀಜು ಮಾಡದೆ ಮತ್ಯಾರ ಮನೆ ಮುಂದೆಯೋ ರಸ್ತೆಯ ನಡುಮಧ್ಯೆಯೋ ಮಾಡಲಿ ಎಂಬ ಕುತಿತ್ಸ ಯೋಜನೆ.

ನಾನು ಟೊಕಿಯೋದಲ್ಲಿ ಅನೇಕ ನಾಯಿ ಪಾಲಕರನ್ನು ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವುದನ್ನು ನೋಡಿದ್ದೇನೆ. ಎಲ್ಲರೂ ಜೊತೆಗೆ ಒಂದು ಪ್ಲಾಸ್ಟಿಕ್ ಬ್ಯಾಗನ್ನು ಜೊತೆಗೆ ಯಾಕೆ ತೆಗೆದುಕೊಂಡು ಹೋಗುತ್ತಾರೆಂದು ಬಹಳ ದಿನದ ತನಕ ನೋಡುತ್ತಿದ್ದರೆ ಒಂದು ದಿನ ತಿಳಿಯಿತು. ಆ ನಾಯಿಯ ಗಲೀಜನ್ನು ಪ್ಲಾಸ್ಟಿಕ್ ನಲ್ಲಿ ತುಂಬಿಕೊಳ್ಳುತ್ತಿರುವಾಗ ನಾನು ನಾಯಿ ಯಜಮಾನನನ್ನು ನೋಡಿದೆ. ಆ ಹಾದಿಯಲ್ಲಿ ನನ್ನ ಬಿಟ್ಟರೆ ಮತ್ಯಾರೂ ಇರದಿದ್ದರೂ ಆತ ಆ ಕೆಲಸ ಖಡಾಕಂಡಿತ ಮಾಡುತ್ತಿದ್ದ ಎನ್ನುವುಧು ಗ್ಯಾರಂಟಿ. ಈ ರೀತಿಯ ನಾಗರಿಕ ಪ್ರಜ್ಞೆ ನಿಜಕ್ಕೂ ನಮ್ಮಲ್ಲಿಯೂ ಇದ್ದರೇ ಎನ್ನುವ ಆಲೋಚನೆ ಒಮ್ಮೆ ಮನದೆದುರು ಹಾದಿ ಹೋಗಿದ್ದಂತೂ ನಿಜ.

ಇಂದು ಯೋಯೋಗಿಯಲ್ಲಿರುವ ನಮ್ಮ ಆಫೀಸಿಗೆ ಕಂಪನಿಯ ಮೇಲಧಿಕಾರಿಗಳು ಬಂದಿದ್ದಾರೆಂದು ಹೊರಟಿದ್ದೆ. Ebisu ಎನ್ನುವ ಸ್ಟೇಷನನಲ್ಲಿ ಒಬ್ಬ ಸ್ವಯಂಚಾಲಿತ ಟಿಕೇಟ್ ಕೌಂಟರ ಬಳಿ ಲಾಬ್ರಡಾರ ಜಾತಿಯ ನಾಯಿ ಹಿಡಿದು ನಿಂತಿದ್ದ. ಮಾನವ ಸಹಜ ಕುತೂಹಲದೊಂದಿಗೆ ನೋಡಿದರೆ ಆತ ಕುರುಡ. ಆ ನಾಯಿ ಪೂರ್ತಿ ತರಬೇತಿ ಪಡೆದ ನಾಯಿಯ ತರಹ ಕಂಡಿತು. ಕಾರಣ ಆ ನಾಯಿ ಅಷ್ಟು ಜನ ದಟ್ಟನೆಯಲ್ಲಿಯೂ ವೀಚಲಿತವಾಗದೆ ಆರಾಮವಾಗಿ ಒಡೆಯನ ಕಣ್ಣಾಗಿ ನಿಂತಿತ್ತು. ಕಾಕತಾಳಿಯ ಎನ್ನುವಂತೆ ತಿರುಗಿ ಆಫೀಸಿನಿಂದ ಬರುವಾಗ ( ಸುಮಾರು ೧.೩೦ ತಾಸಿನ ನಂತರ ) ಯೋಯೋಗಿ ಸ್ಟೇಷನ್ನನಲ್ಲಿ ಅದೆ ಮಹಾನುಭಾವನನ್ನು ಕಂಡೆ. ಈ ಬಾರಿ ಇನ್ನೊಂದು ವಿಚಿತ್ರ ಕಣ್ಣಿಗೆ ಬಿತ್ತು. ಅಲ್ಲಿ ಇದ್ದ ೪ ಸ್ವಯಂಚಾಲಿತ ಟಿಕೇಟ್ ಕೌಂಟರನಲ್ಲಿ ೧ ಮಾತ್ರ ಖಾಲಿ ಇತ್ತು. ಆ ನಾಯಿ ಆ ಖಾಲಿ ಇರುವ ಕೌಂಟರ ಬಳಿ ಅವನನ್ನು ಕರೆದೊಯ್ದು ನಿಲ್ಲಿಸಿದಾಗ ನಿಜಕ್ಕೂ ಆತ ಎಷ್ಟು ಸ್ವತಂತ್ರವಾಗಿ ಯಾರ ಮೇಲೂ ಹೊರೆಯಾಗದೆ ಬದುಕುತ್ತಿದ್ದಾನೆ ಅನ್ನಿಸ್ತು. ಆ ನಾಯಿಗೂ ಈ ನಾಯಿ ಪ್ರಿಯನ ನಮಸ್ಕಾರ !

ನೀಲುಗಳ ಅರಸುತಾ ...

ನೀಲುಗಳ ಅರಸುತಾ ಹೊರಟಾಗ
ಕೈಗೆಟಕಿದ್ದು ಧೂಳು ಹಿಡಿದ
ಟಿಪ್ಪಣೆ ಪುಸ್ತಕ ..
ತಡಕಾಡಿದಾಗ ಹೊರಬಂದಿದ್ದು
ಹಳೆಯ ನೆನಪು - ಮೈ ಆವರಿಸಿ ಕೊಂಡ ಘಾಟು ಬೆವರಿನ ತರಹ ...
ಜೊತೆಗೆ ಸಿಕ್ಕಿದ್ದು ಈ ಕೆಲವು ಬರಹ. ಬೆಳಕು ಕಾಣದೆ ಅಟ್ಟ ಸೇರಿದ ಬರಹದಲ್ಲಿ ಇದೂ ಒಂದು.

1.
ನಿನ್ನ ಪ್ರೇಮದ ಬೆಳಕಿನಲ್ಲಿ
ನಾನು ನೋಡಿದ ಜಗತ್ತು
ನನ್ನ 'ಕುರುಡ' ಎಂದಾಗ
ಆವರಿಸಿದ್ದು ಅಮವಾಸ್ಯೆಯ ಕತ್ತಲೆ

2.
ಯೌವನ್ನ ಎಂಬ ತೂಗು ಸೇತುವೆ
ಆವರಿಸಿದೆ ಸುಕ್ಕುಗಟ್ಟಿದ ಬಳ್ಳಿ
ಇನ್ನೆಲ್ಲಿ ಆರ್ಭಟದ ತೂಗುವಿಕೆ
ಪುಸ್ತಕದ ಪುಟದಂದದಿ ಮೈ-ಮುಖದ
ಮೇಲೆ ಹರಡಿರಲು ನೆರಿಗೆ.

3.
ಚಳಿಯಾದಾಗ ಮಾತ್ರ ನೀನೆ
ಬೇಕು ಅಂತ ಚಡಪಡಿಸುವ
ಜೀವಕ್ಕೆ ಬೆಳಿಗ್ಗೆ ಹೊತ್ತಿನಲ್ಲಿ
ಸಾಕ್ಷಿ ಹೇಳಲು ಬಾರದ
ಅಮಾಯಕತೆ.